ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಬಂಧನಕ್ಕೊಳಪಗಾದ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸಂಸ್ಥಾಪಕ ಯಾಸಿನ್ ಭಟ್ಕಲ್ ಸೋದರ ಸಂಬಂಧಿ, ಭಟ್ಕಳದ ಅಬ್ದುಲ್ ವಾಹಿದ್ ಸಿದ್ದಿಬಾಪ ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಪಾಕಿಸ್ತಾನದಿಂದ ಭಾರತಕ್ಕೆ ಹಣ ಕಳುಹಿಸುತ್ತಿದ್ದ ಎಂಬ ವಿಚಾರ ಇದೀಗ ಬಹಿರಂಗಗೊಂಡಿದೆ.
ಭಟ್ಕಳದ ಉಗ್ರ ಉಬ್ದುಲ್ ವಾಹಿದ್ ಸಿದ್ದಿ ಬಾಪ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಅಬ್ದುಲ್ ವಾಹಿದ್ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸದಸ್ಯನಾಗಿದ್ದು, ಈತ ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗುವುದಕ್ಕಾಗಿ ಉಗ್ರರಿಂದ ಹಣ ಪಡೆದು ಭಾರತಕ್ಕೆ ಸಾಗಿಸುತ್ತಿದ್ದ ಎಂದು ಹೇಳಿಕೊಂಡಿದೆ.
ಉಗ್ರರಿಗೆ ಹಣ ಸಾಗಿಸುವಲ್ಲಿ ಅಬ್ದುಲ್ ವಾಹಿದ್ ಪ್ರಮುಖ ಪಾತ್ರವಹಿಸಿದ್ದು, ಜೊತೆಗೆ ಭಾರತದ ಜೈಲುಗಳಲ್ಲಿರುವ ಉಗ್ರರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಹಣ ನೀಡುವ ಮೂಲಕ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಎಂದು ಚಾರ್ಜ್ ಶೀಟ್ ನಲ್ಲಿ ಎನ್ ಐಎ ಹೇಳಿದೆ.
ಹವಾಲ ದಂಧೆ ಮೂಲಕ ಹಣಕಾಸು ವಹಿವಾಟುಗಳನ್ನು ನಡೆಸಿ, ಭಯೋತ್ಪಾದನಾ ದಾಳಿ ನಡೆಸಿ ದೇಶದ ಏಕತೆ, ಸಮಗ್ರತೆ, ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆಯುಂಟು ಮಾಡಲು ಯತ್ನ ನಡೆಸುತ್ತಿದ್ದ. ಅಲ್ಲದೆ. ವಿದೇಶಗಳಲ್ಲಿ ಗೌಪ್ಯವಾಗಿ ಉಗ್ರ ಚಟುವಟಕೆಗಳಲ್ಲಿ ತೊಡಗಿಕೊಂಡಿದ್ದ ಎಂದು ದೋಷಾರೋಪಣಾ ಪಟ್ಟಿಯಲ್ಲಿ ಎನ್ಐಎ ಉಲ್ಲೇಖಿಸಿದೆ.
ಭಾರತದಲ್ಲಿ ನಡೆದ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಅಬ್ದುಲ್ ವಾಹಿದ್ ಪ್ರಮುಖನಾಗಿದ್ದು, ಈತನಿಗಾಗಿ ಹಲವು ವರ್ಷಗಳಿಂದ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದರು. ಮಾರುವೇಷ ಧರಿಸಿ ಅಬ್ದುಲ್ ವಾಹಿದ್ ದುಬೈನಿಂದ ದೆಹಲಿಗೆ ಬರುತ್ತಿದ್ದಾನೆಂಬ ಖಚಿತ ಮಾಹಿತಿ ದೊರಕುತ್ತಿದ್ದಂತೆಯೇ ಕಳೆದ ಮೇ.30 ರಂದು ಎನ್ಐಎ ಅಧಿಕಾರಿಗಳು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಪಡಿಸಿತ್ತು