ಚೆನ್ನೈ: ಜಲಗಡಿ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಶ್ರೀಲಂಕಾ ನೌಕಾಪಡೆ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇಬ್ಬರು ಭಾರತೀಯ ಮೀನುಗಾರರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ತಮಿಳುನಾಡು ಮೂಲದ ಮೀನುಗಾರರದಾ ದಿನೇಶ್ ಮತ್ತು ಅರವಿಂದ್ ಎಂಬುವವರು ಗಾಯಗೊಂಡ ವ್ಯಕ್ತಿಗಳಾಗಿದ್ದಾರೆ.
ಗಾಯಗೊಂಡಿರುವವರನ್ನು ಪುದುಚೇರಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
9 ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಈ ವೇಳೆ ಶ್ರೀಲಂಕಾ ನೌಕಾಪಡೆ ಏಕಾಏಕಿ ಗುಂಡಿನ ದಾಳಿ ನಡೆಸಿದೆ. ಈ ವೇಳೆ ಮೀನುಗಾರರು ಬೋಟಿನ ಹಿಂದೆ ಅವಿತುಗೊಂಡಿದ್ದಾರೆ. ಈ ವೇಳೆ ಇಬ್ಬರಿಗೆ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ.
ಗುಂಡಿನ ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮೀನುಗಾರರೊಬ್ಬರು, ಮೀನು ಹಿಡಿಯಲು ಭಾನುವಾರ ರಾತ್ರಿ ಸಮುದ್ರ ತೀರಕ್ಕೆ ಹೋಗಿದ್ದೆವು. ಎರಡು ದಿನಗಳ ಬಳಿಕ ಹಿಂತಿರುಗಿ ಬರುವಾಗ ಶ್ರೀಲಂಕಾ ನೌಕಾಪಡೆಯ ಅಧಿಕಾರಿಯೊಬ್ಬರು ನಿಧಾನಗತಿಯಲ್ಲಿ ಹೋಗುವಂತೆ ತಿಳಿಸಿದ್ದರು. ಇದಕ್ಕೆ ನಾವು ನಕಾರ ವ್ಯಕ್ತಪಡಿಸಿದಾಗ ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದ್ದರು ಎಂದು ಹೇಳಿಕೊಂಡಿದ್ದಾರೆ.