ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ
ನವದೆಹಲಿ: ಅಯೋಧ್ಯೆ ವಿವಾದ ಕುರಿತ ವಿಚಾರಣೆಯನ್ನು ದಿನ ಬಿಟ್ಟು ದಿನ ತುರ್ತು ವಿಚಾರಣೆ ನಡೆಸುವಂತೆ ಬಿಜೆಪಿ ನಾಯಕ ಸುಬ್ರಹ್ಮಣ್ಯ ಸ್ವಾಮಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಪುರಸ್ಕರಿಸಿದೆ.
ಕಳೆದ ಆಗಸ್ಟ್ ನಲ್ಲಿ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದ ಸುಬ್ರಹ್ಮಣ್ಯ ಸ್ವಾಮಿ, ಅಯೋಧ್ಯೆ ವಿಚಾರವನ್ನು ಚರ್ಚೆಗೆ ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿದ್ದರು. ಅಲ್ಲದೆ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿದ್ದರು.
ಬಿಜೆಪಿ ಪ್ರಣಾಳಿಕೆಯಲ್ಲಿ, ಕಾನೂನು ಪ್ರಕಾರವಾಗಿ ಕೋರ್ಟ್ ಮೂಲಕ ಅಯೋಧ್ಯೆ ವಿವಾದಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದೆವು. ಇದನ್ನೀಗ ಎಲ್ಲಾ ರಾಜಕೀಯ ಪಕ್ಷಗಳು ವ್ಯಾಪಕವಾಗಿ ಸ್ವೀಕರಿಸಿವೆ ಎಂದು ಅವರು ಹೇಳಿದರು.
ಅಯೋಧ್ಯೆ ವಿವಾದ ಕುರಿತ ವಿಚಾರಣೆ ಸುಪ್ರೀಂ ಕೋರ್ಟ್ ಮುಂದಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಲು ದಿನ ಬಿಟ್ಟು ದಿನ ವಿಚಾರಣೆ ನಡೆಸಬೇಕೆಂಬ ಅಭಿಪ್ರಾಯ ಎಲ್ಲಾ ಪಕ್ಷಗಳಿಂದ ಬಂದಿದೆ.
1992ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ಕೋರಿ ಕಳೆದ ಫೆಬ್ರವರಿಯಲ್ಲಿ ಸುಬ್ರಹ್ಮಣ್ಯ ಸ್ವಾಮಿ ಹೊಸ ಅರ್ಜಿ ಸಲ್ಲಿಸಿದ್ದರು.
ಅವರು ತಮ್ಮ ಅರ್ಜಿಯಲ್ಲಿ, ಇಸ್ಲಾಂ ರಾಷ್ಟ್ರಗಳಲ್ಲಿರುವ ಪದ್ಧತಿಯಂತೆ ಸಾರ್ವಜನಿಕ ಉಪಯೋಗಕ್ಕೆ ಮಸೀದಿ ಇರುವ ಸ್ಥಳ ಬೇಕೆಂದಾದರೆ ಮಸೀದಿಯನ್ನು ಬೇರೆಡೆಗೆ ವರ್ಗಾಯಿಸಬಹುದು. ಆದರೆ ದೇವಸ್ಥಾನವನ್ನು ಒಂದೆಡೆ ನಿರ್ಮಿಸಿದರೆ ಅದನ್ನು ವರ್ಗಾಯಿಸುವುದು ಅಸಾಧ್ಯ ಎಂದು ಹೇಳಿದ್ದಾರೆ.
'' ಪಾವಿತ್ರ್ಯತೆ ವಿಚಾರದಲ್ಲಿ ದೇವಸ್ಥಾನ ಮತ್ತು ಮಸೀದಿಯನ್ನು ಸಮನಾಗಿ ನೋಡಲು ಸಾಧ್ಯವಿಲ್ಲ. ಇಸ್ಲಾಂ ಧರ್ಮದಲ್ಲಿ ಮಸೀದಿ ಬಹು ಅವಶ್ಯವಾದ ಅಂಗವಲ್ಲ ಎಂದು ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ ಹೇಳಿದೆ. ಆದರೆ ಇಂಗ್ಲೆಂಡ್ ನ ಹೌಸ್ ಆಫ್ ಲಾರ್ಡ್ಸ್ ಪ್ರಕಾರ(1991) ದೇವಸ್ಥಾನ ಯಾವಾಗಲೂ ಬಳಕೆಯಲ್ಲಿಲ್ಲದ ಸಂದರ್ಭದಲ್ಲಿ ಅಥವಾ ನಾಶಗೊಂಡ ಸಂದರ್ಭದಲ್ಲಿ ಕೂಡ ದೇವಸ್ಥಾನವಾಗಿಯೇ ಇರುತ್ತದೆ ಎಂದು ಹೇಳಿದೆ. ಹಾಗಾಗಿ ರಾಮಜನ್ಮ ಭೂಮಿಯಲ್ಲಿ ರಾಮ ದೇವಸ್ಥಾನ ನಿರ್ಮಾಣವಾಗಲೇ ಬೇಕು ಎಂದು ಸುಬ್ರಹ್ಮಣ್ಯ ಸ್ವಾಮಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos