ದೇಶ

ನೋಟು ನಿಷೇಧ ಬಿಸಿ: ಸಂಸತ್ತಿನ ಎಟಿಎಂಗಳಿಗೂ ತಟ್ಟಿದ ಹಣದ ಬರ

Manjula VN

ನವದೆಹಲಿ: ದುಬಾರಿ ನೋಟು ಮೇಲಿನ ನಿಷೇಧದ ಬಿಸಿ ಸಂಸತ್ತಿನ ಎಟಿಎಂಗಳ ಮೇಲೆಯೂ ತಟ್ಟಿದ್ದು, ಸಂಸತ್ತಿನ ಬಳಿಯಿರುವ ಎಟಿಎಂಗಳಲ್ಲಿ ಹಣವಿಲ್ಲದೆ ಬರ ಬಂದಂತಾಗಿದೆ.

ಸಂಸತ್ತಿನ ಬಳಿಯಿರುವ ಎಟಿಎಂಗಳಲ್ಲಿ ಸಾಮಾನ್ಯವಾಗಿ ಹಣವಿರುತ್ತದೆ. ಅದರಲ್ಲೂ ಸಂಸತ್ತಿನಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದ್ದು ಎಟಿಎಂಗಳಲ್ಲಿ ಹಣವನ್ನು ಹಾಕಲಾಗಿರುತ್ತದೆ ಎಂಬ ವಿಶ್ವಾಸದ ಮೇರೆಗೆ ನಿನ್ನೆ ಸಂಸತ್ತಿನ ಬಳಿಯಿರುವ ಎಟಿಎಂಗಳ ಮುಂದೆ ಸಂಸತ್ತಿನ ಸಿಬ್ಬಂದಿಗಳು, ಭದ್ರತಾ ಸಿಬ್ಬಂದಿಗಳು ಹಾಗೂ ಕೆಲ ಪತ್ರಕರ್ತರು ಗಂಟೆಗಟ್ಟಲೆ ಸಾಲಿನಲ್ಲಿ ನಿಂತಿದ್ದರು.

ಎಟಿಎಂನಲ್ಲಿ ಹಣ ಭರ್ತಿ ಮಾಡದಿದ್ದ ಕಾರಣ, ಎಷ್ಟು ಹೊತ್ತು ಕಾದರೂ ಎಟಿಎಂಗಳಲ್ಲಿ ಹಣ ಬರಲಿಲ್ಲ. ಹೀಗಾಗಿ ಸಾಲಿನಲ್ಲಿ ನಿಂತಿದ್ದವರು ಸಪ್ಪೆ ಮೋರೆ ಹೊತ್ತು ಹಿಂತಿರುವಂತೆ ಆಗಿತ್ತು. ಸಂಜೆ ವೇಳೆಗೆ ಎಟಿಎಂ ನಲ್ಲಿ ಹಣ ಹಾಕಲಾಗುತ್ತದೆ ಎಂಬ ಮಾತುಗಳು ಕೇಳಿಬಂದ ಕಾರಣ ಮತ್ತೆ ಜನರು ಸಾಲಿನಲ್ಲಿ ನಿಲ್ಲಲು ಆರಂಭಿಸಿದ್ದರು. ಆದರೆ, ಎಟಿಎಂಗೆ ಹಣ ಹಾಕಲು ಸಿಬ್ಬಂದಿಗಳು ಬರಲೇ ಇಲ್ಲ. ಇದರಿಂದ ಮತ್ತೆ ಜನರು ಸಪ್ಪೆ ಮೋರೆ ಹೊತ್ತು ಹಿಂದಿರುಗುವಂತೆ ಆಗಿತ್ತು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪ್ರಧಾನಮಂತ್ರಿಯವರ ಕಚೇರಿ ಕೆಲವೇ ದೂರದಲ್ಲಿದೆ. ಸಂಸತ್ತಿನ ಮುಂದಿರುವ ಎಟಿಎಂಗಳಲ್ಲೇ ಹಣವಿಲ್ಲ ಎಂದಾದ ಮೇಲೆ ಸಾಮಾನ್ಯ ಎಟಿಎಂಗಳಲ್ಲಿನ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸಿಕೊಳ್ಳಿ ಎಂದು ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರೊಬ್ಬರು, ಸರ್ಕಾರ ಬಳಿ ಯಾವಾಗ ಹಣ ಬರುತ್ತದೆಯೋ ಆಗ ಎಟಿಎಂಗಳಲ್ಲೂ ಹಣ ಭರ್ತಿಯಾಗುತ್ತದೆ ಎಂದು ಹೇಳಿದರು.

SCROLL FOR NEXT