ದೇಶ

ಉತ್ತರ ಪ್ರದೇಶ ರೈಲು ದುರಂತ: ಸಂತಾಪ ಸೂಚಿಸಿದ ರಾಜನಾಥ ಸಿಂಗ್

Manjula VN

ನವದೆಹಲಿ: ಉತ್ತರಪ್ರದೇಶದ ಪುಖರಾಯಾ ಬಳಿ ಸಂಭವಿಸಿದ ಭೀಕರ ರೈಲು ದುರಂತ ಕುರಿತಂತೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಭಾನುವಾರ ಸಂತಾಪ ಸೂಚಿಸಿದ್ದಾರೆ.

ದುರ್ಘಟನೆ ಕುರಿತಂತೆ ಈಗಾಗಲೇ ರೈಲ್ವೆ ಸಚಿವ ಸುರೇಶ್ ಪ್ರಭು ಅವರೊಂದಿಗೆ ರಾಜನಾಥ ಸಿಂಗ್ ಅವರು ಮಾತುಕತೆ ನಡೆಸಿದ್ದು, ಅಧಿಕಾರಿಗಳ ಬಳಿ ವರದಿ ಪಡೆದುಕೊಂಡು, ಘಟನಾ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡುವಂತೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ವಾರಣಾಸಿ ಮತ್ತು ಲಖನೌನಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರತಿಯೊಂದು ತಂಡದಲ್ಲೂ 45 ಸಿಬ್ಬಂದಿಗಳಿದ್ದಾರೆಂದು ತಿಳಿದುಬಂದಿದೆ.

ಉತ್ತರಪ್ರದೇಶದ ಪುಖರಾಯಾ ಬಳಿ ಝಾನ್ಸಿ-ಕಾನ್ಪುರ ರೈಲ್ವೆ ಮಾರ್ಗದಲ್ಲಿ ಇಂದು ಬೆಳಿಗ್ಗೆ 14 ಬೋಗಿಗಳಿದ್ದ ಇಂದೋರ್ ಪಾಟ್ನಾ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿತ್ತು. ದುರ್ಘಟನೆಯಲ್ಲಿ ಈ ವರೆಗೂ 63 ಮಂದಿ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

SCROLL FOR NEXT