ದೆಹಲಿಯಲ್ಲಿ ಇಂದು ಎಟಿಎಂ ಮುಂದೆ ಸಾಲಿನಲ್ಲಿ ನಿಂತಿದ್ದ ಜನರ ಬಳಿಗೆ ಹೋಗಿ ಸಮಸ್ಯೆ ಆಲಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ನವದೆಹಲಿ: ಕೇಂದ್ರ ಸರ್ಕಾರ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ಜನಸಾಮಾನ್ಯರ ಸಂಕಷ್ಟಗಳನ್ನು ತಿಳಿಯಲೆಂದು ಸಾಮಾನ್ಯರಂತೆ ಇತ್ತೀಚೆಗೆ ಬ್ಯಾಂಕ್ ನಲ್ಲಿ ಸರದಿಯಲ್ಲಿ ನಿಂತು ನೋಟು ವಿನಿಮಯ ಮಾಡಿಕೊಂಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ದೇಹಲಿಯ ಪೋಸ್ಟ್ ಸೆಂಟರ್ ನಲ್ಲಿ ಎಟಿಎ ಮುಂದೆ ಕಾಣಿಸಿಕೊಂಡರು.
ದೆಹಲಿಯ ಜಹಂಗೀರ್ ಪುರಿ, ಇಂದರ್ ಲೊಕ್ ಮತ್ತು ಝಕೀರಾ, ಆನಂದ್ ಪ್ರಭಾತ್ ಪ್ರದೇಶಗಳಲ್ಲಿ ಎಟಿಎಂಗಳ ಮುಂದೆ ಸಾಲಿನಲ್ಲಿ ನಿಂತಿರುವ ಜನರ ಬಳಿಗೆ ಹೋಗಿ ಮಾತುಕತೆ ನಡೆಸಿದರು ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ದೇಶದಲ್ಲಿ ಕಪ್ಪುಹಣ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನರೇಂದ್ರ ಮೋದಿ ಸರ್ಕಾರ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಗೊಳಿಸಿ 13 ದಿನಗಳು ಕಳೆದಿವೆ. ನೋಟುಗಳ ಹಿಂತೆಗೆತದಿಂದ ಸಾಮಾನ್ಯ ಜನಜೀವನಕ್ಕೆ ತೊಂದರೆಯುಂಟಾಗಿದ್ದು, ಜನರು ಹೊಸ ನೋಟುಗಳನ್ನು ಪಡೆಯಲು ಗಂಟೆಗಟ್ಟಲೆ ಎಟಿಎಂಗಳ ಮುಂದೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ.
ಕಳೆದ ವಾರ ದೆಹಲಿಯ ಸರೋಜಿನಿ ನಗರ ಮಾರುಕಟ್ಟೆಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಬೀದಿ ಬದಿಯ ವ್ಯಾಪಾರಿಗಳನ್ನು ಭೇಟಿ ಮಾಡಿ, ಮೋದಿ ಸರ್ಕಾರ ಕರೆನ್ಸಿಗಳನ್ನು ನಿಷೇಧಿಸಿರುವುದರಿಂದ ವ್ಯಾಪಾರ, ವಹಿವಾಟಿಗೆ ತೊಂದರೆಯುಂಟಾಗುತ್ತಿದೆಯೇ ಎಂದು ವಿಚಾರಿಸಲು ಹೋಗಿದ್ದರು. ಆಗ ಅಲ್ಲಿ ಮೋದಿ ಪರವಾದ ಘೋಷಣೆಯನ್ನು ಹಲವರು ಕೂಗುವ ಮೂಲಕ ರಾಹುಲ್ ಗಾಂಧಿಯವರಿಗೆ ಮುಜುಗರವುಂಟಾಗಿತ್ತು.