ನವದೆಹಲಿ: ಅಧಿಕ ಮೌಲ್ಯದ ನೋಟುಗಳ ನಿಷೇಧದಿಂದ ಈ ದೇಶದ ಬಡ ಜನರು ಎಟಿಎಂಗಳ ಮುಂದೆ ಸಾಲಿನಲ್ಲಿ ನಿಂತು ಸಮಯ ವ್ಯರ್ಥ ಮಾಡಬೇಕಾಗಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಪ್ತರು ಮತ್ತು ಧನಿಕರು ಯಾವುದೇ ತೊಂದರೆಯಿಲ್ಲದೆ ಹಣ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಅವರು ಇಂದು ಬೆಳಗ್ಗೆ ದೆಹಲಿಯ ಅನೇಕ ಕಡೆ ಎಟಿಎಂಗಳ ಮುಂದೆ ಸಾಲಿನಲ್ಲಿ ನಿಂತಿರುವ ಜನರನ್ನು ಹೋಗಿ ಮಾತನಾಡಿಸಿದರು. ಅವರ ಸಮಸ್ಯೆಗಳನ್ನು ಆಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ದಿಢೀರ್ ನಿರ್ಧಾರದ ಬಳಿಕ ತಾವು ಬಹಳ ತೊಂದರೆಗೆ ಸಿಲುಕಿ ಹಾಕಿಕೊಂಡಿದ್ದೇವೆ ಎಂದು ಜನರು ಹೇಳುತ್ತಿದ್ದಾರೆ. ಬ್ಯಾಂಕು ಮತ್ತು ಎಟಿಎಂ ಹಿಂದುಗಡೆ ಶ್ರೀಮಂತ ಆಯ್ದ ವ್ಯಕ್ತಿಗಳಿಗೆ ಹೊಸ ನೋಟುಗಳನ್ನು ನೀಡುತ್ತಿದ್ದು, ಬಡವರಾದ ನಾವು ಗಂಟೆಗಟ್ಟಲೆ ಹೊರಗೆ ಸಾಲಿನಲ್ಲಿ ನಿಂತುಕೊಳ್ಳಬೇಕಾಗಿದೆ ಎಂದು ಜನರು ಹೇಳುತ್ತಿದ್ದಾರೆ ಎಂದರು. ಜನರ ಸಮಸ್ಯೆಗಳನ್ನು ಕಣ್ಣಾರೆ ನೋಡಲು ಇಲ್ಲಿಗೆ ಬಂದಿರುವುದಾಗಿ ರಾಹುಲ್ ಗಾಂಧಿ ತಿಳಿಸಿದರು.
ಕೆಲವು ಆಯ್ದ ಜನರ ಅಭಿಪ್ರಾಯವನ್ನು ಕೇಳಿ ದೇಶದ ಅತಿದೊಡ್ಡ ಆರ್ಥಿಕ ನಿರ್ಧಾರವನ್ನು ಪ್ರಧಾನಿಯವರು ತೆಗೆದುಕೊಂಡಿದ್ದಾರೆ. ಆ ಸಮಯದಲ್ಲಿ ಅವರು ದೇಶದ ಸಾಮಾನ್ಯ ಜನತೆಯ ಪರಿಸ್ಥಿತಿ ಬಗ್ಗೆ ಆಲೋಚಿಸಿರಲಿಲ್ಲ ಎಂದು ರಾಹುಲ್ ಗಾಂಧಿ ದೂರಿದರು.
ನಿನ್ನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಇಂದೊರ್-ಪಾಟ್ನಾ ಎಕ್ಸ್ ಪ್ರೆಸ್ ರೈಲು ದುರಂತದ ಬಗ್ಗೆ ಮಾತನಾಡಿದ ಅವರು, ಭಾರತದ ರೈಲ್ವೆ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಬೇಕಾದ ಅಗತ್ಯವಿದೆ. ಪ್ರಧಾನಿಯವರು ಹಳೆಯ ಯೋಜನೆಗಳನ್ನು ಘೋಷಿಸುವ ಮುನ್ನ, ಬುಲ್ಲೆಟ್ ರೈಲನ್ನು ಪರಿಚಯಿಸುವ ಮೊದಲು ದೇಶದ ಸಾಮಾನ್ಯ ಜನತೆಯ ಸುರಕ್ಷತೆ ಬಗ್ಗೆ ಮೊದಲು ಗಮನಹರಿಸಬೇಕಾಗಿದೆ ಎಂದು ಹೇಳಿದರು.