ದೇಶ

ಅಧಿಕಾರದಲ್ಲಿರುವ ಪ್ರಧಾನಿ ಮೋದಿಯವರು ವಿರೋಧ ಪಕ್ಷಗಳ ಪ್ರಶ್ನೆಗೆ ಉತ್ತರಿಸಬೇಕು; ಗುಲಾಂ ನಬಿ ಆಜಾದ್

Manjula VN

ನವದೆಹಲಿ: ನರೇಂದ್ರ ಮೋದಿಯವರು ಭಾರತದ ಪ್ರಧಾನಮಂತ್ರಿಯಾಗಿದ್ದು, ಬಿಜೆಪಿಯ ಪ್ರಚಾರಕರಲ್ಲ. ಅಧಿಕಾರದಲ್ಲಿರುವ ಪ್ರಧಾನಿ ಮೋದಿಯವರು ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಬುಧವಾರ ಹೇಳಿದ್ದಾರೆ.

ದುಬಾರಿ ನೋಟಿನ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದರ ವಿರುದ್ಧ ರಾಜ್ಯಸಭೆ ಹಾಗೂ ಲೋಕಸಭೆಯ ಕಲಾಪದಲ್ಲಿ ಪ್ರತಿಪಕ್ಷಗಳು ತೀವ್ರ ಗದ್ದಲವನ್ನುಂಟು ಮಾಡುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.

ನೋಟು ನಿಷೇಧ ಕುರಿತಂತೆ ಪ್ರಧಾನಿ ಮೋದಿಯವರು ಪ್ರತಿಕ್ರಿಯೆ ನೀಡುವಂತೆ ಪಟ್ಟು ಹಿಡಿದು ಕುಳಿತಿವೆ. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಗುಲಾಂ ನಬಿ ಆಜಾದ್ ಅವರು, ದುಬಾರಿ ನೋಟಿನ ಮೇಲೆ ನಿಷೇಧ ಹೇರಿರುವುದರಿಂದ ಸಾಮಾನ್ಯ ಜನರ ಮೇಲೆ ಗಂಭೀರವಾದ ಪರಿಣಾಮ ಬೀರತೊಡಗಿದೆ. ಹೀಗಾಗಿ ಅಧಿಕಾರದಲ್ಲಿರುವ ಪ್ರಧಾನ ಮೋದಿಯವರು ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲೇಬೇಕು ಎಂದಿದ್ದಾರೆ.

ಪ್ರಧಾನಮಂತ್ರಿಗಳೇ ಸಂಸತ್ತಿನ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದಾದರೆ, ಸಂಸದರು ಇನ್ನು ಏನು ಮಾಡಲು ಸಾಧ್ಯ? ನರೇಂದ್ರ ಮೋದಿಯವರು ದೇಶದ ಪ್ರಧಾನಮಂತ್ರಿಯಾಗಿದ್ದು, ಅವರು ಬಿಜೆಪಿ ಪ್ರಚಾರಕರಲ್ಲ ಎಂಬುದನ್ನು ತಿಳಿಯಬೇಕಿದೆ. ನೋಟು ನಿಷೇಧ ವಿಚಾರ ಬಹಳ ಗಂಭೀರವಾದ ವಿಚಾರವಾಗಿದ್ದು, ಕೇಂದ್ರದ ಕಠಿಣ ನಿರ್ಧಾರದಿಂದಾಗಿ ಈ ವರೆಗೂ 70 ಮಂದಿ ಜನರು ಸಾವನ್ನಪ್ಪಿದ್ದಾರೆ. ಕೋಟ್ಯಾಂತರ ಸಾಮಾನ್ಯ ಜನರಿಗೆ ಸಮಸ್ಯೆ ಎದುರಾಗಿದೆ. ಹೀಗಾಗಿ ಪ್ರಧಾನಿ ಮೋದಿಯವರು ಸಂಸತ್ತಿಗೆ ಹಾಜರಾಗಬೇಕಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕಿದೆ ಎಂದು ತಿಳಿಸಿದ್ದಾರೆ.

SCROLL FOR NEXT