ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧಿಸಲು ಕೈಗೊಂಡಿರುವ ನಿರ್ಧಾರ ವಿಶ್ವದಲ್ಲೇ ಪೂರ್ವಸಿದ್ಧತೆ ಇಲ್ಲದ ಅತಿ ದೊಡ್ಡ ಆರ್ಥಿಕ ಪ್ರಯೋಗ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ನೋಟು ನಿಷೇಧವನ್ನು ವಿರೋಧಿಸಿ ಸಂಸತ್ ಭವನದ ಎದುರು ಪ್ರತಿಪಕ್ಷಗಳ ಒಕ್ಕೂಟ ನಡೆಸಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಯಾವುದೇ ಪೂರ್ವ ಸಿದ್ಧತೆ ಇಲ್ಲದೇ ವಿಶ್ವದ ಅತಿ ದೊಡ್ಡ ಆರ್ಥಿಕ ಪ್ರಯೋಗ ನಡೆಸಿದ್ದಾರೆ, ಈ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕು ಎಂಬ ಪ್ರತಿಪಕ್ಷಗಳ ಒಕ್ಕೂಟದ ಬೇಡಿಕೆ ದೃಢವಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿಪಕ್ಷಗಳ ಒಕ್ಕೂಟದ ಪ್ರತಿಭಟನೆಯಲ್ಲಿ ವಿವಿಧಪಕ್ಷಗಳಿಂದ ಸುಮಾರು 200 ಸಂಸದರು ಭಾಗವಹಿಸಿದ್ದು, ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧಿಸುವ ನಿರ್ಧಾರವನ್ನು ಕೈಗೊಂಡ ಉದ್ದೇಶವನ್ನು ಸಂಸತ್ ನಲ್ಲಿ ವಿವರಿಸಬೇಕು ಹಾಗೂ ಕೈಗಾರಿಕೋದ್ಯಮಿಗಳಿಗೆ, ಬಿಜೆಪಿಯಲ್ಲಿರುವ ಸ್ನೇಹಿತರಿಗೆ ಈ ಬಗ್ಗೆ ಮೊದಲೇ ಮಾಹಿತಿ ನೀಡಿದ್ದು ಏಕೆ ಎಂಬುದನ್ನು ತಿಳಿಸಬೇಕು ಎಂದು ಪಟ್ಟು ಹಿಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಾಡಿರುವುದು ಪೂರ್ವಸಿದ್ಧತೆ ಇಲ್ಲದ ಪ್ರಯೋಗ, ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಪ್ರಧಾನಿ ಯಾರೊಂದಿಗೂ ಚರ್ಚಿಸಿಲ್ಲ. ಹಣಕಾಸು ಸಚಿವ, ಮುಖ್ಯ ಆರ್ಥಿಕ ಸಲಹೆಗಾರರಿಂದಲೂ ಈ ಬಗ್ಗೆ ಸಲಹೆ ಪಡೆದಿಲ್ಲ. ನೋಟು ನಿಷೇಧದ ನಿರ್ಧಾರ ವಿತ್ತ ಸಚಿವರ ನಿರ್ಧಾರ ಅಲ್ಲ. ಇದು ಪ್ರಧಾನಿಯೊಬ್ಬರ ನಿರ್ಧಾರ. ನೃತ್ಯ ಮಾಡುವ ಪಾಪ್ ಸಂಗೀತದ ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಾರೆ. ಆದರೆ ಅವರು ಸಂಸತ್ ಗೆ ಬಂದು ನೋಟು ನಿಷೇಧದ ಬಗ್ಗೆ ಮಾಹಿತಿ ನೀಡಲು ಸಿದ್ಧವಿಲ್ಲ. ಸಂಸತ್ ಗೆ ಬಂದು ಮಾತನಾಡಲು ಪ್ರಧಾನಿ ಏಕೆ ಹಿಂಜರಿಯುತ್ತಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಖಂಡಿತವಾಗಿಯೂ ಯಾವುದೋ ಒಂದು ವಿಚಾರದ ಬಗ್ಗೆ ಆತಂಕಗೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನೋಟು ನಿಷೇಧವನ್ನು ವಿರೋಧಿಸಿ ಸಂಸತ್ ಭವನದ ಬಳಿ ಇರುವ ಗಾಂಧಿ ಪ್ರತಿಮೆಯ ಎದುರು ಎಸ್ ಪಿ, ಬಿಎಸ್ ಪಿ, ಟಿಎಂಸಿ, ಡಿಎಂಕೆ, ಸಿಪಿಐ(ಎಂ) ಸಂಸದರು ಪ್ರತಿಭಟನೆ ನಡೆಸುತ್ತಿದ್ದಾರೆ. ನೋಟು ನಿಷೇಧದ ನಿರ್ಧಾರದ ಹಿಂದೆ ದೊಡ್ಡ ಹಗರಣ ನಡೆದಿದೆ. ಈ ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕೆಂದು ಪ್ರತಿಪಕ್ಷಗಳ ಒಕ್ಕೂಟದ ಸಂಸದರು ಒತ್ತಾಯಿಸಿದ್ದಾರೆ.