ಪ್ರಧಾನ ಮಂತ್ರಿ ನರೇಂದ್ರ ಮೋದಿ
ನವದೆಹಲಿ: ಅಧಿಕ ಮೌಲ್ಯದ ನೋಟುಗಳ ಅಪಮೌಲ್ಯೀಕರಣದಿಂದ ಜನತೆಗೆ ಉಂಟಾಗಿರುವ ಪರಿಣಾಮವನ್ನು ಬಗೆಹರಿಸುವ ಮತ್ತು ಸರ್ಕಾರದ ನಡೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದುವರಿಸಿದ್ದಾರೆ.
ಶೇಕಡಾ 93ರಷ್ಟು ಜನ ತಮ್ಮ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ನರೇಂದ್ರ ಮೋದಿ ನಿನ್ನೆ ಹೇಳಿದ್ದಾರೆ. ಮೋದಿಯವರ ಖಾಸಗಿ ವೆಬ್ ಸೈಟ್ ನಲ್ಲಿ ನೀಡಿದ ಹೇಳಿಕೆ ಪ್ರಕಾರ, ತಾವು ನಡೆಸಿದ ಸಮೀಕ್ಷೆಗೆ 15 ಗಂಟೆಯೊಳಗೆ 5 ಲಕ್ಷ ಜನ ಪ್ರತಿಕ್ರಿಯೆ ನೀಡಿದ್ದು ಅವರಲ್ಲಿ ಶೇಕಡಾ 2ರಷ್ಟು ಮಂದಿ ಮಾತ್ರ ವಿರುದ್ಧವಾದ ಅಭಿಪ್ರಾಯ ನೀಡಿದ್ದಾರೆ ಎಂದು ಹೇಳಿದ್ದಾರೆ.
ಆದರೆ ಸರ್ಕಾರದ ಮೂಲಗಳು ಉಲ್ಲೇಖಿಸಿರುವ ದಾಖಲೆಗಳಲ್ಲಿ ವ್ಯತಿರಿಕ್ತ ಹೇಳಿಕೆ ಪ್ರಕಟವಾಗಿದ್ದು ಅಲ್ಲಿ ಜನರು ಕಪ್ಪು ಹಣದ ವಿರುದ್ಧ ಹೋರಾಡುವ ಸರ್ಕಾರದ ಪ್ರಯತ್ನ ಸಂಪೂರ್ಣವಾಗಿ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕಷ್ಟೆ ಎಂದು ಹೇಳಿದ್ದಾರೆ.
ನವೆಂಬರ್ 8ರಿಂದ ದೇಶಾದ್ಯಂತ ಜನಧನ ಖಾತೆಗಳಲ್ಲಿ 21 ಕೋಟಿ ರೂಪಾಯಿ ಠೇವಣಿಯಿಡಲಾಗಿದೆ ಎಂದು ಹಣಕಾಸು ಇಲಾಖೆಯ ಮೂಲಗಳು ತಿಳಿಸಿವೆ.
ಕಾಳಧನಿಕರು ಬಡವರ ಜನಧನ ಖಾತೆಯಲ್ಲಿ ಹಣವನ್ನು ಠೇವಣಿ ಇಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿರುವುದರಿಂದ ತೆರಿಗೆ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಇಂತಹ ಪ್ರಕರಣ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಜಾಸ್ತಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಆಸಕ್ತಿಕರ ವಿಷಯವೆಂದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ನೋಟು ನಿಷೇಧವನ್ನು ಬಲವಾಗಿ ಖಂಡಿಸುತ್ತಿದ್ದು ವಿರೋಧ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಹಳ್ಳಿಗಳಲ್ಲಿ ಜನರಿಗೆ ಮತ್ತು ರೈತರಿಗೆ ತೊಂದರೆಯಾಗದಿರಲು ನಬಾರ್ಡ್ ನಿಂದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳಿಗೆ ನೀಡಲು ಸೂಚಿಸಲಾಗಿದೆ. ಪ್ರಸಕ್ತ ಋತುವಿನಲ್ಲಿ ರೈತರಿಗೆ ಕೃಷಿಗೆ ಅನನುಕೂಲವಾಗದಂತೆ ನೋಡಿಕೊಳ್ಳಲು ಬೆಳೆ ಸಾಲ ನೀಡಲು ಮುಂದಾಗಿವೆ. 1.5 ಲಕ್ಷ ಅಂಚೆ ಕಚೇರಿಗಳಲ್ಲಿ ಹೊಸ ನೋಟುಗಳು ಲಭ್ಯವಾಗುವಂತೆ ನೋಡಿಕೊಳ್ಳುವುದು, ಇ-ವ್ಯಾಲೆಟ್ ಸಾಮರ್ಥ್ಯವನ್ನು ದ್ವಿಗುಣಗೊಳಿಸುವುದು, ಮೊಬೈಲ್ ಬ್ಯಾಂಕಿಂಗ್ ಗೆ ಸೇವಾ ಶುಲ್ಕವನ್ನು ವಿಧಿಸದಿರುವುದು ಮೊದಲಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹಳ್ಳಿಗಳಲ್ಲಿ ರೈತರು ಬೇಸಿಕ್ ಮೊಬೈಲ್ ಸೆಟ್ ಗಳನ್ನು ಇಟ್ಟುಕೊಂಡಿರುವುದರಿಂದ ಈ ಕ್ರಮ ರೈತರಿಗೆ ನೆರವಾಗಲಿದೆ ಎನ್ನುತ್ತಾರೆ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್.
ಹೆದ್ದಾರಿಗಳಲ್ಲಿ ಟೋಲ್ ಶುಲ್ಕವನ್ನು ತೆಗೆದುಕೊಳ್ಳುವುದನ್ನು ವಿದ್ಯುನ್ಮಾನಗೊಳಿಸುವುದು ಮೊದಲಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮಧ್ಯೆ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು ಮೌನವಾಗಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics