ನಮ್ಮ ಹಿತಾಸಕ್ತಿಗಳ ಬಗ್ಗೆಯೂ ಗಮನವಿರಲಿ: ಚೀನಾಗೆ ಭಾರತ
ನವದೆಹಲಿ: ಚೀನಾದೊಂದಿಗಿನ ದ್ವಿಪಕ್ಷೀಯ ಸಂಬಂಧದ ಬಗ್ಗೆ ಮಾತನಾಡಿರುವ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಎಸ್ ಜೈಶಂಕರ್, ಚೀನಾದೊಂದಿಗೆ ವ್ಯಾವಹಾರಿಕ ರೀತಿಯಲ್ಲೇ ಮಾತುಕತೆ ಮುಂದುವರೆಸಲಿದ್ದೇವೆ ಎಂದು ಹೇಳಿದ್ದಾರೆ.
ಚೀನಾ ಭಾರತದ ಆಶೋತ್ತರ, ಹಿತಾಸಕ್ತಿಗಳನ್ನೂ ಗಮನದಲ್ಲಿಟ್ಟುಕೊಂಡು ದ್ವಿಪಕ್ಷೀಯ ಸಂಬಂಧವನ್ನು ಬೆಸೆಯಬೇಕಿದೆ, ಅದಕ್ಕೆ ಅನುಗುಣವಾಗಿಯೇ ನಾವು ಚೀನಾದೊಂದಿಗೆ ಮಾನಾಡಬೇಕು ಹಾಗೆಯೇ ಮಾತನಾಡುತ್ತೇವೆ ಎಂದು ಜೈ ಶಂಕರ್ ತಿಳಿಸಿದ್ದಾರೆ. ಭಾರತದ ಎಸ್ಎಸ್ ಜಿ ಸದಸ್ಯತ್ವ, ಉಗ್ರ ಮಸೂದ್ ಅಜರ್ ಗೆ ನಿಷೇಧ ವಿಧಿಸುವುದು ಸೇರಿದಂತೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಹಲವು ಯತ್ನಗಳಿಗೆ ಚೀನಾ ಅಡ್ಡಿ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಚೀನಾದೊಂದಿಗಿನ ದ್ವಿಪಕ್ಷೀಯ ಮಾತುಕತೆ ವೇಳೆ ಚೀನಾ ಭಾರತದ ಹಿತಾಸಕ್ತಿಗಳ ಬಗ್ಗೆಯೂ ಗಮನವಿರಲಿ ಎಂದು ಸಲಹೆ ನೀಡಿದೆ.
ಇತ್ತೀಚೆಗಷ್ಟೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಚೀನಾ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಈ ಭೇಟಿಯ ನಂತರ ಚೀನಾ-ಭಾರತ ದ್ವಿಪಕ್ಷೀಯ ಸಂಬಂಧದ ಬಗ್ಗೆ ಜೈಶಂಕರ್ ಪ್ರತಿಕ್ರಿಯೆ ನೀಡಿದ್ದು ನಮ್ಮ ಹಿತಾಸಕ್ತಿಗಳ ಬಗ್ಗೆಯೂ ಚೀನಾಗೆ ಗಮನ ಇರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.