ನವದೆಹಲಿ: ಹೊಸ ಬದಲಾವಣೆಗೆ ಶೀಘ್ರದಲ್ಲೇ ದೇಶದ ಆರ್ಥಿಕತೆ ಒಗ್ಗಿಕೊಳ್ಳಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿರುವುದರಿಂದ ದೇಶದ ಆರ್ಥಿಕತೆ ದೊಡ್ಡ ಹಿನ್ನಡೆಯಾಗಿದೆ ಎಂಬ ಪ್ರತಿಪಕ್ಷಗಳ ವಾದವನ್ನು ತಳ್ಳಿ ಹಾಕಿದ ನಿರ್ಮಲಾ ಸೀತಾರಾಮನ್ ಅವರು, ಹಳೆಯ ನೋಟು ನಿಷೇಧ ಬಳಿಕ ಆಸ್ತಿತ್ವಕ್ಕೆ ಬಂದಿರುವ ಹೊಸ ನೋಟುಗಳ ಚಲಾವಣೆ ಪ್ರಕ್ರಿಯೆಯಿಂದಾಗಿ ಕೊಂಚ ಹಿನ್ನಡೆಯಾಗಿರಬಹುದು. ಆದರೆ ಇದರಿಂದ ದೇಶದ ಆರ್ಥಿಕತೆಗೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ. ಹೊಸ ಬದಲಾವಣೆಗೆ ಆರ್ಥಿಕತೆ ಶೀಘ್ರದಲ್ಲೇ ಒಗ್ಗಿಕೊಳ್ಳಲಿದೆ ಎಂದು ಹೇಳಿದರು.
ಪ್ರಸ್ತುತ ಬದಲಾವಣೆಯಿಂದಾಗಿ ತ್ರೈಮಾಸಿಕ (ಅಕ್ಟೋಬರ್-ಡಿಸೆಂಬರ್-2016)ರ ವರದಿಯಲ್ಲಿ ನೋಟು ನಿಷೇಧ ಕ್ರಮ ಕೊಂಚ ಪರಿಣಾಮ ಬೀರಿರಬಹುದು. ಆದರೆ ಭವಿಷ್ಯದಲ್ಲಿ ಇದರಿಂದ ದೊಡ್ಡ ಲಾಭವಿದೆ ಎಂದು ಅವರು ಆಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ನಗದ ವಹಿವಾಟನ್ನು ಹೊರತು ಪಡಿಸಿದಂತೆ ಚೆಕ್, ಡೆಬಿಟ್ ಕಾರ್ಡ್ ಹಾಗೂ ವಿ-ವ್ಯಾಲೆಟ್ ಗಳ ಮುಖಾಂತರ ಸಾಮಾನ್ಯ ಬ್ಯಾಂಕಿಂಗ್ ನಡೆಯುತ್ತಿದೆ. ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೊಸ ನೋಟುಗಳು ಲಭ್ಯವಿದ್ದು, ನೋಟುಗಳ ಅಭಾವವಿರುವ ಪ್ರದೇಶಗಳಲ್ಲಿ ಅವುಗಳನ್ನು ರವಾನೆ ಮಾಡಲು ಕೇಂದ್ರ ಸರ್ಕಾರ ಹಾಗೂ ಆರ್ ಬಿಐ ಈಗಾಗಲೇ ಸೂಕ್ತ ಕ್ರಮಗಳನ್ನು ಕೈಗೊಂಡಿದೆ.
ಕೇಂದ್ರ ಸರ್ಕಾರದ ಕ್ರಮದಿಂದಾಗಿ ದಶಕಗಳಿಂದ ಕೊಳೆಯುತ್ತಿದ್ದ ಕಪ್ಪುಹಣ ಈಗಷ್ಟೇ ಹೊರಬರಲು ಆರಂಭಿಸಿದೆ. ಹೀಗಾಗಿ ಇದರಿಂದ ದೇಶದ ಆರ್ಥಿಕತೆ ದೊಡ್ಡ ಪ್ರಮಾಣದ ಲಾಭವೇ ಹೊರತು ಹಿನ್ನಡೆಯಲ್ಲ ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.