ನವದೆಹಲಿ: ಕಾಶ್ಮೀರ ಏನು ನಿಮ್ಮಪ್ಪನ ಆಸ್ತಿಯೇ...? ಎಂದು ಪ್ರಶ್ನಿಸಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫರೂಫ್ ಅಬ್ದುಲ್ಲಾ ವಿರುದ್ಧ ಆರ್'ಎಸ್ಎಸ್ ಕಿಡಿಕಾರಿದ್ದು, ತಮ್ಮ ಹೇಳಿಕೆಯ ಮೂಲಕ ಫರೂಖ್ ಅಬ್ದುಲ್ಲಾ ಅವರು ಭಾರತೀಯನಲ್ಲ ಎಂಬುದನ್ನು ಖಚಿತಪಡಿಸಿದ್ದಾರೆಂದು ಶನಿವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಆರ್'ಎಸ್ಎಸ್ ನಾಯಕ ಇಂದ್ರೇಶ್ ಕುಮಾರ್ ಅವರು, ಫರೂಖ್ ಅಬ್ದುಲ್ಲಾ ಅವರು ಭಾರತದ ಹಿತಾಸಕ್ತಿಗಳ ವಿರುದ್ಧವಿದ್ದು, ತಮ್ಮ ಹೇಳಿಕೆಯ ಮೂಲಕವೇ ತಾವು ಭಾರತೀಯನಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆಂದು ಹೇಳಿದ್ದಾರೆ.
ಕಾಶ್ಮೀರಕ್ಕಾಗಿ ನಮ್ಮ ಯೋಧರು ತ್ಯಾಗ ಹಾಗೂ ಬಲಿದಾನವನ್ನು ನೀಡುತ್ತಿದ್ದು, ಫರೂಖ್ ಅಬ್ದುಲ್ಲಾ ಅವರು, ತಮ್ಮ ಹೇಳಿಕೆ ಮೂಲಕ ಭಾರತಕ್ಕೆ ಅಗೌರವವನ್ನು ಸೂಚಿಸಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪಾಕಿಸ್ತಾನದೊಂದಿಗಿಲ್ಲ ಎಂಬುದು ವಾಸ್ತವಿಕ ಸತ್ಯಾಂಶವಾಗಿದ್ದು, ಪಿಒಕೆಯಲ್ಲಿರುವ ಜನರು ಕಳೆದ 70 ವರ್ಷಗಳಿಂದಲೂ ಭಾರತದ ಭಾಗವಾಗಬೇಕೆಂದು ಪ್ರತಿಭಟಿಸುತ್ತಿದ್ದಾರೆ. ಇದೀಗ ಅಬ್ದುಲ್ಲಾ ಅವರು ತಮ್ಮ ಹೇಳಿಕೆ ಮೂಲಕ ತಾವೊಬ್ಬ ಭಾರತೀಯನಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಸಂವಿಧಾನ ಹಾಗೂ ಅಗೌರವದ ವಿರುದ್ಧ ದನಿಯೆತ್ತಿದ್ದ ಜಮ್ಮು ಮತ್ತು ಕಾಶ್ಮೀರ ಜನತೆ ಇಂದು ಫರೂಖ್ ಅಬ್ದುಲ್ಲಾ ಅವರ ವಿರುದ್ದ ದನಿ ಎತ್ತಬೇಕಿದೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಫರೂಖ್ ಅಬ್ದುಲ್ಲಾ ಅವರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರವೇನು ನಿಮ್ಮಪ್ಪನ ಆಸ್ತಿಯೇ...? ಪಿಒಕೆಯನ್ನು ಪಾಕಿಸ್ತಾನದಿಂದ ಮರುವಶ ಪಡಿಸಿಕೊಳ್ಳುವ ಧೈರ್ಯ ನಿಮಗಿದೆಯೇ ಎಂದು ಪ್ರಶ್ನಿಸಿದ್ದರು.