ತ್ರಿಪುರಾ ಸಿಎಂ ಮಾಣಿಕ್ ಸರ್ಕಾರ್
ಅಗರ್ತಲಾ: ನೋಟ್ ನಿಷೇಧದಿಂದ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಲು ರಚಿಸಲಾಗುತ್ತಿರುವ ಕೇಂದ್ರ ಐದು ರಾಜ್ಯಗಳ ಮುಖ್ಯಮಂತ್ರಿಗಳನ್ನೊಳಗೊಂಡ ಸಮಿತಿಯಲ್ಲಿರಲು ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ನಿರಾಕರಿಸಿದ್ದಾರೆ.
"ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸ್ವತಃ ಕರೆ ಮಾಡಿ, ಮುಖ್ಯಮಂತ್ರಿಗಳ ಸಮಿತಿಯಲ್ಲಿದ್ದು, ನೋಟು ನಿಷೇಧದಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವಂತೆ ಮನವಿ ಮಾಡಿದರು. ಆದರೆ ನನಗೆ ಇದರಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದೆ ಎಂದು ಮಾಣಿಕ್ ಸರ್ಕಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪೂರ್ವ ಸಿದ್ಧತೆಗಳಿಲ್ಲದೇ ಏಕಾಏಕಿ ನೋಟುಗಳನ್ನು ನಿಷೇಧಗೊಳಿಸಿರುವುದು ಜನರನ್ನು ಸಮಸ್ಯೆ ಎದುರಿಸುವಂತೆ ಮಾಡಿದೆ ಎಂದು ಸಿಪಿಐಎಂ ನಾಯಕ ಆರೋಪಿಸಿದ್ದಾರೆ. ಎಟಿಎಂ ಗಳು ಎಂದಿನಂತೆ ಕಾರ್ಯನಿರ್ವಹಿಸುವವರೆಗೆ ಸಾರ್ವಜನಿಕರಿಗೆ 500, 1000 ರೂ ನೋಟುಗಳನ್ನು ಬಳಕೆ ಮಾಡಲು ಅವಕಾಶ ನೀಡಬೇಕು ಎಂದು ಮಾಣಿಕ್ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ನೋಟ್ ನಿಷೇಧದಿಂದ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಐದು ರಾಜ್ಯಗಳ ಮುಖ್ಯಮಂತ್ರಿಗಳನ್ನೊಳಗೊಂಡ ಸಮಿತಿಯೊಂದನ್ನು ರಚಿಸಲು ಕೇಂದ್ರ ನಿರ್ಧರಿಸಿದ್ದು, ಈ ಸಮಿತಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಮುಖ್ಯಸ್ಥರಾಗುವ ಸಾಧ್ಯತೆ ಇದೆ.