ನವದೆಹಲಿ: ನಗ್ರೋಟಾ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿಯನ್ನೂ ಸಲ್ಲಿಸದೇ ಸಂಸತ್ ಅಧಿವೇಶನವನ್ನು ಪ್ರಾರಂಭಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಕಾಂಗ್ರೆಸ್ ಯೋಧರ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಲೋಕಸಭಾ ಕಲಾಪದಿಂದ ಪ್ರತಿಪಕ್ಷಗಳು ಹೊರನಡೆದ ಬಳಿಕ ಪ್ರತಿಕ್ರಿಯೆ ನೀಡಿರುವ ವೆಂಕಯ್ಯ ನಾಯ್ಡು, ಕಾಂಗ್ರೆಸ್ ಪಕ್ಷಕ್ಕೆ ಸದನದಲ್ಲಿ ಚರ್ಚೆ ನಡೆಯುವುದೂ ಬೇಕಿಲ್ಲ, ಸಂಸತ್ ಕಲಾಪ ನಡೆಯುವುದೂ ಬೇಕಿಲ್ಲ. ಏಕೆಂದರೆ ಚರ್ಚೆ/ ಕಲಾಪ ನಡೆದರೆ ತಮ್ಮ ಬಣ್ಣ ಬಯಲಾಗುತ್ತದೆ ಎಂಬ ಹೆದರಿಕೆ ಅವರಿಗಿದೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಹುತಾತ್ಮ ಯೋಧರ ವಿಷಯದಲ್ಲೂ ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ ಎಂದಿದ್ದಾರೆ, ವೆಂಕಯ್ಯ ನಾಯ್ಡು ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸ್ಪೀಕರ್ ಸುಮಿತ್ರಾ ಮಹಾಜನ್, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ವಿಷಯ ರಾಜಕೀಯ ವಿಷಯ ಅಲ್ಲ, ಆದರೆ ಕೂಂಬಿಂಗ್ ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ಸಂಪೂರ್ಣ ವರದಿ ಬರಲಿ, ಹುತಾತ್ಮ ಯೋಧರಿಗೆ ನಾವು ಎಂದಿಗೂ ಗೌರವ ಸಲ್ಲಿಸುತ್ತಾ ಬಂದಿದ್ದೇವೆ ಎಂದು ಹೇಳಿದ್ದಾರೆ. ಸುಮಿತ್ರಾ ಮಹಾಜನ್ ಹೇಳಿಕೆಯನ್ನು ಬೆಂಬಲಿಸಿದ ವೆಂಕಯ್ಯ ನಾಯ್ಡು, ಕೂಂಬಿಂಗ್ ಕಾರ್ಯಾಚರಣೆ ಬಳಿಕ ಸಂಸತ್ ನಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಗುತ್ತದೆ ಎಂದು ಹೇಳಿದ್ದಾರೆ.