ದೇಶ

ಪಾಕಿಸ್ತಾನ ಕಲಾವಿದರ ವಿವಾದ: ಕಲೆ, ಸಂಸ್ಕೃತಿಗೆ ಗಡಿಯಿಲ್ಲ- ಶರದ್ ಯಾದವ್

Manjula VN

ನವದೆಹಲಿ: ಕಲೆ ಮತ್ತು ಸಂಸ್ಕೃತಿಗೆ ಯಾವುದೇ ರೀತಿಯ ಗಡಿಯಿಲ್ಲ ಎಂದು ಜನತಾದಳ (ಸಂಯುಕ್ತ) ಪಕ್ಷದ ಮಾಜಿ ಅಧ್ಯಕ್ಷ ಶರದ್ ಯಾದವ್ ಅವರು ಸೋಮವಾರ ಹೇಳಿದ್ದಾರೆ.

ಪಾಕಿಸ್ತಾನ ಕಲಾವಿದರ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪಾಕಿಸ್ತಾನ ಕಲಾವಿದರ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರ ತಪ್ಪು. ಇದರಿಂದ ಯಾವುದೇ ಪ್ರಯೋಜನವಿಲ್ಲ. ಕಲೆ ಹಾಗೂ ಸಂಸ್ಕೃತಿಗೆ ಇಂತಹದ್ದೇ ಎಂದು ಯಾವುದೇ ರೀತಿಯ ಗಡಿ ಇರುವುದಿಲ್ಲ. ಕಲಾವಿದರಿಗೆ ನಿಯಂತ್ರಣ ಹೇರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನ ಕಲಾವಿದರು ಭಾರತ ತೊರೆಯುವಂತೆ ಎಂಎನ್ಎಸ್ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಪ್ರತಿಕ್ರಿಯೆ ನೀಡಿದ್ದ ಸಲ್ಮಾನ್ ಖಾನ್, ಪಾಕಿಸ್ತಾನ ಕಲಾವಿದರೇನು ಭಯೋತ್ಪದಾರಕರಲ್ಲ. ಕಲೆಗೂ ಭಯೋತ್ಪಾದನೆಗೂ ಸಾಕಷ್ಟು ವ್ಯತ್ಯಾಸಗಳಿವೆ. ಕಲೆ ಹಾಗೂ ಭಯೋತ್ಪಾದನೆಯನ್ನು ಸಮಾನ ರೀತಿಯಲ್ಲಿ ನೋಡಬಾರದು. ಪಾಕಿಸ್ತಾನ ಕಲಾವಿದರನ್ನು ಭಯೋತ್ಪಾದನಕರಂತೆ ನೋಡುವುದನ್ನು ನಿಲ್ಲಿಸಬೇಕೆಂದು ಹೇಳಿದ್ದರು.

ಇದರಂತೆ ಪಾಕಿಸ್ತಾನ ಕಲಾವಿದರಿಗೆ ನಿಷೇಧ ಹಾಗೂ ಸಲ್ಮಾನ್ ಖಾನ್ ಅವರ ಹೇಳಿಕೆ ಕುರಿತಂತೆ ನಿನ್ನೆಯಷ್ಟೇ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅವರು, ನಮ್ಮ ಹೋರಾಟವೇನಿದ್ದರೂ ಭಯೋತ್ಪಾದನೆ ವಿರುದ್ಧವೇ ಹೊರತು, ಕಲೆಯಾಗಲೀ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳ ವಿರುದ್ಧವಾಗಲೀ ಅಲ್ಲ ಎಂದು ತಿಳಿಸಿದ್ದರು.

SCROLL FOR NEXT