ಜಮ್ಮು: ಪೆಲೆಟ್ ಗನ್ ದಾಳಿಗೆ ಬಾಲಕ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಶ್ರೀನಗರದ ಹಲವೆಡೆ ಶನಿವಾರ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ನಿನ್ನೆ ಶುಕ್ರವಾರವಾದ್ದರಿಂದ ಪುಲ್ವಾಮ, ಶೋಪಿಯಾನ್ ಮತ್ತು ಉತ್ತರ ಕಾಶ್ಮೀರದ ಹಲವು ಜಿಲ್ಲೆಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಈ ವೇಳೆ ಪ್ರತಿಭಟನಾಕಾರರು ಹಾಗೂ ಭದ್ರತಾ ಸಿಬ್ಬಂದಿಗಳ ನಡುವೆ ಘರ್ಷಣೆ ಏರ್ಪಟ್ಟಿತ್ತು. ಪ್ರತಿಭಟನಾಕಾರರನ್ನು ಚದುರಿಸುವ ಸಲುವಾಗಿ ಭದ್ರತಾ ಸಿಬ್ಬಂದಿಗಳು ಪೆಲೆಟ್ ಗನ್ ದಾಳಿ ಮಾಡಿದ್ದರು.
ಈ ವೇಳೆ 13 ವರ್ಷದ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡಿದ್ದ. ಇದರಂತೆ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಇಂದು ಮೃತಪಟ್ಟಿದ್ದಾನೆ.
ಬಾಲಕ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಇದೀಗ ಕಾಶ್ಮೀರದ ಹಲವೆಡೆ ಮತ್ತೆ ಹಿಂಸಾಚಾರ ಆರಂಭವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ 7 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬಾಲಕನ ಸಾವಿನ ಬಳಿಕ ಮತ್ತೆ ಹಿಂಸಾಚಾರ ಆರಂಭವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ನಿಷೇಧಾಜ್ಞೆಯನ್ನು ಜಾರಿ ಮಾಡಲು ನಿರ್ಧರಿಸಲಾಗಿದೆ. ನೌಹಟ್ಟಾ, ಕಹ್ನ್ಯಾರ್, ರೈನವಾರಿ, ಎಂಆರ್. ಗುಂಜ್ ಮತ್ತು ಸಫಾಕಡಲ್, ಮೈಸುಮಾ ಮತ್ತು ಬಟಮಲೂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಶ್ರೀನಗರ ಉಪ ಆಯುಕ್ತ ಫರೂಕ್ ಅಹ್ಮದ್ ಲೋನ್ ಅವರು ಹೇಳಿದ್ದಾರೆ.
ಶ್ರೀನಗರದ ಹಲವೆಡೆ ಕರ್ಫ್ಯೂ ಜಾರಿ ಮಾಡಿರುವುದರಿಂದ ಜನರು ಸಂಕಷ್ಟದಲ್ಲಿ ಕಾಲ ಕಳೆಯುವಂತಾಗಿದ್ದು, ಈಗಾಗಲೇ ಅಂಗಡಿ ಮುಗ್ಗಟ್ಟುಗಳು, ವ್ಯಾವಹಾರಿಕ ಚಟುವಟಿಕೆಗಳು ಸಂಪೂರ್ಣವಾಗಿ ಬಂದ್ ಆಗಿವೆ. ಹಿಂಸಾಚಾರ ಬೆನ್ನಲ್ಲೇ ಇದೀಗ ಪ್ರತ್ಯೇಕತಾವಾದಿಗಳ ಸಂಘಟನೆಗಳು 'ಪ್ರತಿಭಟನಾ ಕ್ಯಾಲೆಂಡರ್' ವೊಂದನ್ನು ಬಿಡುಗಡೆ ಮಾಡಿದ್ದಾರೆ. ಕ್ಯಾಲೆಂಡರ್ ನಲ್ಲಿರುವ ಪ್ರಕಾರ ಪ್ರತ್ಯೇಕತಾವಾದಿಗಳು ಅಕ್ಟೋಬರ್ 6-13 ರವರೆಗೂ ಬಂದ್ ಆಚರಣೆಗೆ ಕರೆ ನೀಡಿದ್ದಾರೆಂದು ಹೇಳಲಾಗುತ್ತಿದೆ.
21 ವರ್ಷದ ಬುರ್ಹಾನ್ ಮುಜಾಫರ್ ವಾನಿ ಮತ್ತು ಆತನ ಇಬ್ಬರು ಸಹಚರರನ್ನು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಯೋಧರು ಹತ್ಯೆ ಮಾಡಿದ್ದರು. ಇದರಂತೆ ಬುರ್ಹಾನ್ ವಾನಿ ಹತ್ಯೆ ಖಂಡಿಸಿ ಜುಲೈ.9 ರಿಂದಲೂ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.