ಮುಜಾಫರ್ನಗರ: ಪಾಕಿಸ್ತಾನ ಕಲಾವಿದರ ಪರವಾಗಿ ಮಾತನಾಡಿ ಬೆಂಬಲ ವ್ಯಕ್ತಪಡಿಸುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರ ಬೆಂಬಲಿಗರು ಪ್ರತಿಭಟನೆಗಿಳಿದಿದ್ದಾರೆ.
ಸಲ್ಮಾನ್ ಖಾನ್ ವಿರುದ್ಧ ವಿರೋಧ ವ್ಯಕ್ತಪಡಿಸುತ್ತಿರುವ ಸಂಗೀತ್ ಸೋಮ್ ಅವರ ಬೆಂಬಲಿಗರು ಮುಜಾಫರ್ನಗರದ ಖಾಟೊಲಿ ಟೌನ್ ಬಳಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ವೇಳೆ ಸಲ್ಮಾನ್ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿಭಟನೆ ವೇಳೆ ಪಾಕಿಸ್ತಾನ ಕಲಾವಿದರಿಗೆ ಹೀಗೆಯೇ ಬೆಂಬಲವನ್ನು ನೀಡುತ್ತಿದ್ದರೆ. ಸಲ್ಮಾನ್ ಖಾನ್ ಅವರ ಚಲನಚಿತ್ರಕ್ಕೂ ಭಾರತದಲ್ಲಿ ನಿಷೇಧ ಹೇರಲಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆಂದು ತಿಳಿದುಬಂದಿದೆ.
ಉರಿ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹದಗೆಡುವಂತೆ ಮಾಡಿದ್ದು, ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ಕಲಾವಿದರು ಕೂಡಲೇ ಭಾರತವನ್ನು ತೊರೆಯುವಂತೆ (ಎಂಎನ್ ಎಸ್) ಮಹಾರಾಷ್ಟ್ರ ನವನಿರ್ಮಾಣ ಸೇನೆ ಕರೆ ನೀಡಿತ್ತು. ಇದರ ಬೆನ್ನಲ್ಲೇ ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ ಕೂಡ ಪಾಕಿಸ್ತಾನ ಕಲಾವಿದರಿಗೆ ಭಾರತದಲ್ಲಿ ನಿಷೇಧ ಹೇರಿತ್ತು.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ನಟ ಸಲ್ಮಾನ್ ಖಾನ್ ಅವರು, ಪಾಕಿಸ್ತಾನ ಕಲಾವಿದರು ಕೇವಲ ಕಲಾವಿದರಷ್ಟೇ ಅವರೇನು ಭಯೋತ್ಪಾದಕರಲ್ಲ. ಭಯೋತ್ಪಾದನೆ ಹಾಗೂ ಕಲೆ ಎರಡಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಹೇಳಿದ್ದರು.