ನವದೆಹಲಿ: ಸಾರ್ವಜನಿಕ ಹಣವನ್ನು ಮತ್ತು ಸರ್ಕಾರದ ಕಾರ್ಯತಂತ್ರಗಳನ್ನು ಪ್ರಚಾರಕ್ಕಾಗಿ ಯಾವುದೇ ರಾಜಕೀಯ ಪಕ್ಷಗಳು ಬಳಸಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.
ರಾಜಕೀಯ ಪಕ್ಷಗಳ ಮತ್ತು ಚುನಾವಣಾ ಆಯೋಗ ಪಕ್ಷಕ್ಕೆ ಮಂಜೂರು ಮಾಡಿದ ಪಕ್ಷದ ಚಿಹ್ನೆಯ ಪ್ರಚಾರಕ್ಕಾಗಿ ಸಾರ್ವಜನಿಕ ಹಣ, ಸ್ಥಳ ಅಥವಾ ಸರ್ಕಾರದ ಕಾರ್ಯತಂತ್ರಗಳನ್ನು ಯಾವುದೇ ರಾಜಕೀಯ ಪಕ್ಷಗಳು ಬಳಸಿಕೊಳ್ಳಬಾರದು ಎಂದು ಆಯೋಗ ನಿರ್ದೇಶನ ನೀಡಿದೆ. ಈ ಕುರಿತು ಚುನಾವಣಾ ಆಯೋಗ ಗುರುತಿಸಲ್ಪಟ್ಟ ರಾಷ್ಟ್ರ ಮತ್ತು ರಾಜ್ಯಗಳ ರಾಜಕೀಯ ಪಕ್ಷಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.
ಯಾವುದೇ ರಾಜಕೀಯ ಪಕ್ಷಗಳ ಮ್ತತು ಅವುಗಳ ಚುನಾವಣಾ ಚಿಹ್ನೆಗಳ ಪ್ರಚಾರಕ್ಕಾಗಿ ಸಾರ್ವಜನಿಕ ಸ್ಥಳ, ಹಣವನ್ನು ಬಳಸುವುದು ಉಚಿತ ಮತ್ತು ನ್ಯಾಯಯುತ ಚುನಾವಣೆ ಪರಿಕಲ್ಪನೆಗೆ ವಿರುದ್ಧವಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಚುನಾವಣೆ ಗುರುತು(ಮೀಸಲಾತಿ ಮತ್ತು ಹಂಚುವಿಕೆ) ಆದೇಶ 1968ರ 16ಎಯಡಿ ಕಾನೂನು ಉಲ್ಲಂಘನೆಯಾಗುತ್ತದೆ.
ಉತ್ತರ ಪ್ರದೇಶದಲ್ಲಿ ಮಾಯಾವತಿ ಸರ್ಕಾರದ ಅವಧಿಯಲ್ಲಿ ಬಹುಜನ ಸಮಾಜ ಪಕ್ಷದ ಚಿಹ್ನೆಯಾದ ಆನೆಯ ಮೂರ್ತಿಯನ್ನು ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಿದ್ದನ್ನು ಪ್ರಶ್ನಿಸಿ ಚುನಾವಣಾ ತಂಡವೊಂದು ಸಲ್ಲಿಸಿದ್ದ ಅರ್ಜಿಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.