ಕೊಚ್ಚಿ: ಉಗ್ರರನ್ನು ಎದುರು ಹಾಕಿಕೊಂಡು ಭಯೋತ್ಪಾದನೆ ವಿರುದ್ಧ ಒಂದೆಡೆ ಭಾರತ ಹೋರಾಡುತ್ತಿದ್ದರೆ, ಮತ್ತೊಂದೆಡೆ ನಮ್ಮ ದೇಶದಲ್ಲಿಯೇ ಪುಟ್ಟ ಮಕ್ಕಳಿಗೆ ಭಯೋತ್ಪಾದನೆ ಹೇಳಿಕೊಡುತ್ತಿರುವಂತಹ ಹೇಯ ಕೃತ್ಯಗಳು ನಡೆಯುತ್ತಿರುವುದು ಬೆಳಕಿಗೆ ಬರುತ್ತಿವೆ.
ಅತ್ಯುತ್ತಮ ಪ್ರವಾಸಿಗರ ತಾಣ ಹಾಗೂ ದೇವರ ನಾಡು ಎಂದೇ ಖ್ಯಾತಿಗಳಿಸಿರುವ ಕೇರಳ ರಾಜ್ಯ ಇದೀಗ ಉಗ್ರರ ಅಡಗು ತಾಣ ರಾಜ್ಯವಾಗಿ ಮಾರ್ಪಾಡುಗುತ್ತಿದೆಯೇ ಎಂಬ ಹಲವು ಸಂಶಯಗಳು ಮೂಡತೊಡಗಿವೆ. ಇದಕ್ಕೆ ಉದಾಹರಣೆ ಎಂಬಂತೆ ಕೆಲ ದಿನಗಳ ಹಿಂದಷ್ಟೇ 6 ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ತಂಡ ಬಂಧನಕ್ಕೊಳಪಡಿಸಿತ್ತು. ವಿಚಾರಣೆ ವೇಳೆ ಹಲವು ಸ್ಫೋಟಕ ವಿಚಾರಗಳು ಬಹಿರಂಗಗೊಂಡಿತ್ತು.
ಇದೀಗ ಕೇರಳ ರಾಜ್ಯದ ಶಾಲೆಯೊಂದರಲ್ಲಿ ಏನೂ ಅರಿಯದ ಪುಟ್ಟ ಕಂದಮ್ಮಗಳಿಗೆ ಭಯೋತ್ಪಾದನೆ ಕುರಿತಂತೆ ಪಾಠ ಹೇಳಿಕೊಡುತ್ತಿರುವಂತಹ ಹೇಯ ಘಟನೆಗಳು ಬಹಿರಂಗಗೊಂಡಿದೆ.
ಖಚಿತ ಮಾಹಿತಿ ಆಧಾರದ ಮೇಲೆ ನಿನ್ನೆಯಷ್ಟೇ ಕೇರಳ ರಾಜ್ಯ ಪೊಲೀಸರು ಇಲ್ಲಿನ ಪೀಸ್ ಇಂಟರ್ ನ್ಯಾಷನಲ್ ಶಾಲೆಯೊಂದರ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ ಅಲ್ಲಿನ ಶಿಕ್ಷಕರು ಮಕ್ಕಳಿಗೆ ಇಸ್ಲಾಮಿಕ್ ಕುರಿತ ವಿಷಯ ಕುರಿತಂತೆ ಪಾಠ ಹೇಳಿಕೊಡುತ್ತಿರುವುದು ಕಂಡುಬಂದಿದೆ.
ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಂತಹ ಪಠ್ಯ ಪುಸ್ತಕಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪಠ್ಯ ಪುಸ್ತಕದಲ್ಲಿ ಕೆಲ ಪ್ರಶ್ನೆಗಳಿದ್ದು, ಅದರಲ್ಲಿ ಇಸ್ಲಾಂಗಾಗಿ ನಿಮ್ಮ ಜೀವವನ್ನು ಕೊಡುತ್ತೀರಾ? ಮುಸ್ಲಿಂ ಅಲ್ಲದ ಜನರೊಂದಿಗೆ ಹೇಗೆ ನಡೆದುಕೊಳ್ಳುತ್ತೀರಾ? ಎಂಬ ಭಯೋತ್ಪಾದನೆಗೆ ಸಂಬಂಧಪಟ್ಟಂತಹ ಪ್ರಶ್ನೆಗಳನ್ನು ಕೇಳಲಾಗಿದೆ ಎನ್ನಲಾಗುತ್ತಿದೆ.
ಈ ಶಾಲೆಯಲ್ಲಿ 1 ರಿಂದ 8ನೇ ತರಗತಿಯವರೆಗಿನ ಎಲ್ಲಾ ಮಕ್ಕಳಿಗೆ ಇಸ್ಲಾಮಿಕ್ ಅಧ್ಯಾಯನ ಕಡ್ಡಾಯ ವಿಷಯವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಶಾಲೆಯಲ್ಲಿ ಅನೇಕರು ಕೆಲಸ ಮಾಡುತ್ತಿದ್ದು, ಎಲ್ಲರೂ ಇನ್ನು ಕೆಲವೇ ದಿನಗಳಲ್ಲಿ ಇಸಿಸ್ ಸೇರಲು ನಿರ್ಧರಿಸಿದ್ದರು. ಇದಲ್ಲದೆ, ಕೇರಳದಿಂದ ನಾಪತ್ತೆಯಾಗಿ ಇಸಿಸ್ ಸೇರಿರುವ ವ್ಯಕ್ತಿಗಳೂ ಕೂಡ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ಶಾಲೆಗೆ ಸಂಬಂಧಪಟ್ಟವರೇ ಆಗಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 11 ಶಿಕ್ಷಕರು ಮಕ್ಕಳಿಗೆ ಇಸ್ಲಾಮಿಕ್ ಕುರಿತ ವಿಷಯವನ್ನು ಮಕ್ಕಳಿಗೆ ಬೋಧಿಸುತ್ತಿದ್ದಾರೆ. ಬಿಹಾರದಿಂದ ಈ ಶಿಕ್ಷಕರು ಬಂದಿದ್ದಾರೆಂದು ಅಧಿಕಾರಿ ಹೇಳಿದ್ದಾರೆ.
ದಾಳಿ ವೇಳೆ ಕೆಲ ಮ್ಯಾಪ್ ಗಳು, ಕಂಪ್ಯೂಟರ್ ಗಳು ಹಾಗೂ ಇನ್ನಿತರೆ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.