ದೇಶ

ರಾವಣನ ಬದಲಿಗೆ ಪ್ರಧಾನಿ ಮೋದಿ, ಶಾ ಪ್ರತಿಕೃತಿ ದಹನ; ಮತ್ತೆ ವಿವಾದದಲ್ಲಿ ಜೆಎನ್ ಯು!

Srinivasamurthy VN

ನವದೆಹಲಿ: ದೇಶ ವಿರೋಧಿ ಘೋಷಣೆ ಮೂಲಕ ಕುಖ್ಯಾತಿಗೆ ಕಾರಣವಾಗಿರುವ ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತೆ ಸುದ್ದಿಯಲ್ಲಿದ್ದು, ದಸರಾ ಪ್ರಯುಕ್ತ ವಿವಿ  ಆವರಣದಲ್ಲಿ ರಾವಣನ ಪ್ರತಿಕೃತಿಗೆ ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಹಲವರ ಮುಖಗಳನ್ನು ಅಂಟಿಸಿ ದಹನ ಮಾಡಲಾಗಿದೆ.

ಮೂಲಗಳ ಪ್ರಕಾರ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆಯ (ಎನ್ ಎಸ್ ಯುಐ) ಕಾರ್ಯಕರ್ತರು ಈ ಕೃತ್ಯ ನಡೆಸಿದ್ದು, ದಸರಾ ಪ್ರಯುಕ್ತ ವಿವಿ ಅವರಣದಲ್ಲಿ ನಡೆದ ರಾವಣ ಪ್ರತಿಕೃತಿ  ದಹನ ಕಾರ್ಯಕ್ರಮದಲ್ಲಿ ರಾವಣನ ಬದಲಿಗೆ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಬಿಜೆಪಿ ಮುಖಂಡರಾದ ಸಾಧ್ವಿ ಪ್ರಗ್ಯಾ, ಸಾಕ್ಷಿ ಮಹಾರಾಜ್, ಜ್ಞಾನ್ ದೇವ್ ಅಹುಜಾ. ಯೋಗಿ  ಆದಿತ್ಯಾನಾಥ್, ಜೆಎನ್ ಯು ಉಪ ಕುಲಪತಿ ಎಂ ಜಗದೀಶ್ ಕುಮಾರ್ ಮತ್ತು ವಿವಾದಿತ ಸ್ವಯಂ ಘೋಷಿತ ದೇವ ಮಾನವ ಅಸರಾಂ ಬಾಪು, ಯೋಗ ಗುರು ಬಾಬಾ ರಾಮ್ ದೇವ್ ಹಾಗೂ  ನಾಥೋರಾಮ್ ಗೋಡ್ಸೆ ಅವರ ಮುಖಗಳನ್ನು ರಾವಣನ ತಲೆಗಳಿಗೆ ಅಂಟಿಸಿ ದಹನ ಮಾಡಲಾಗಿದೆ.

ಈ ವಿಚಾರ ಇದೀಗ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಎನ್ ಎಸ್ ಯುಐ ಸಂಘಟನೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಮುಂದಾದ ವಿವಿ ಆಡಳಿತ ಮಂಡಳಿ
ಇನ್ನು ವಿಶ್ವ ವಿದ್ಯಾಲಯ ಆವರಣದಲ್ಲಿ ಪ್ರತಿಕೃತಿ ದಹನ ವಿಚಾರಕ್ಕೆ ಸಂಬಂಧಿಸಿದಂತೆ ವಿವಿ ಆಡಳಿತ ಮಂಡಳಿ ಕ್ರಮಕ್ಕೆ ಮುಂದಾಗಿದ್ದು, ಕಾರ್ಯಕ್ರಮದಲ್ಲಿದ್ದ ಎಲ್ಲ ವಿದ್ಯಾರ್ಥಿಗಳಿಗೆ ನೋಟಿಸ್  ಜಾರಿ ಮಾಡಿದೆ ಎಂದು ತಿಳುದುಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿವಿ ಉಪಕುಲಪತಿ ಎಂ ಜಗದೀಶ್ ಕುಮಾರ್ ಅವರು, ಪ್ರತಿಕೃತಿ ದಹನ ವಿಚಾರ ತಮ್ಮ ಗಮನಕ್ಕೂ ಬಂದಿದೆ.  ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದೇವೆ. ತನಿಖೆ ಬಳಿಕ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ವಿವಿ ಆಡಳಿತ ಮಂಡಳಿ ಕ್ರಮದ ಕುರಿತು ಮಾತನಾಡಿರುವ ಎನ್ ಐಸ್ ಯುಐ ಮುಖಂಡ ಸನ್ನಿ ಧೀಮನ್ ಅವರು, ಈ ಹಿಂದೆಯೂ ಕೂಡ ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿದ್ದೆವು.  ಆಗ ಏನೂ ಆಗಿರಲಿಲ್ಲ. ಆಗ ಬೇಕಿಲ್ಲದ ಅನುಮತಿ ಈಗೇಕೆ..ವಿವಿ ಆವರಣದಲ್ಲಿ ಪ್ರತಿಕೃತಿ ದಹನ ಸಾಮಾನ್ಯ. ಹೀಗಾಗಿ ಇದಕ್ಕೆ ಯಾರ ಅನುಮತಿಯೂ ಬೇಕಿಲ್ಲ ಎಂದು ಹೇಳಿದ್ದಾರೆ.

SCROLL FOR NEXT