ಇಟಾರ್ಸಿ: ಅತ್ಯಾಚಾರಿ ಆರೋಪಿ ಹಾಕಿದ ಬೆದರಿಕೆಗೆ ಹೆದರಿ ಅಪ್ರಾಪ್ತ ಸಂತ್ರಸ್ತೆಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಟಾರ್ಸಿ ನಗರದಲ್ಲಿ ನಡೆದಿದೆ.
ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ ಖೈದಿಯೊಬ್ಬ ಫೆ.16 ರಂದು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ. ತದನಂತರ ವಿಚಾರವನ್ನು ಯಾರಿಗಾದರೂ ಹೇಳಿದರೆ ಸಾಯಿಸುವುದಾಗಿ ಪ್ರತೀನಿತ್ಯ ಬೆದರಿಕೆ ಹಾಕುತ್ತಾ ಬಂದಿದ್ದಾನೆ.
ಅತ್ಯಾಚಾರಿ ಅರೋಪಿಯ ಬೆದರಿಕೆಗೆ ಹೆದರಿದ ಬಾಲಕಿ ನಿನ್ನೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಕೂಡಲೇ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಬಾಲಕಿ ಶೇ.40ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಪ್ರಸ್ತುತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.