ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್
ಚೆನ್ನೈ: ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ತಮಿಳು ನಾಡು ವಿಧಾನಸಭೆ ಪ್ರತಿಪಕ್ಷ ನಾಯಕ, ಡಿಎಂಕೆ ಖಜಾಂಚಿ ಎಂ.ಕೆ.ಸ್ಟಾಲಿನ್ ಇಂದು ಬೆಳಗ್ಗೆ ಹಣಕಾಸು ಸಚಿವ ಒ.ಪನ್ನೀರ್ ಸೆಲ್ವಂ ಮತ್ತು ಲೋಕೋಪಯೋಗಿ ಸಚಿವ ಎಡಪ್ಪಾಡಿ ಕೆ. ಪಲನಿಸಾಮಿ ಅವರನ್ನು ಸಚಿವಾಲಯದಲ್ಲಿ ಭೇಟಿ ಮಾಡಿ ಕರ್ನಾಟಕದೊಂದಿಗಿನ ಕಾವೇರಿ ಜಲ ವಿವಾದದ ಕುರಿತು ಚರ್ಚೆ ನಡೆಸಿದರು.
ಸ್ಟಾಲಿನ್ ಅವರ ಜೊತೆ ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಡಿಎಂಕೆಯ ದೊರೈ ಮುರುಗನ್, ಮಾಜಿ ಸಚಿವ ಕೆ.ಪೊನ್ಮುಡಿ, ಚೆನ್ನೈಯ ಮಾಜಿ ಮೇಯರ್ ಎಂ.ಸುಬ್ರಹ್ಮಣ್ಯನ್ ಮತ್ತು ಡಿಎಂಕೆ ಶಾಸಕರಾದ ಜೆ.ಅನ್ಬಝ್ಹಗನ್ ಮತ್ತು ಪಿ.ಕೆ.ಶೇಖರ್ ಬಾಬು ಇದ್ದರು.
ಸುಮಾರು 20 ನಿಮಿಷಗಳ ಕಾಲ ನಾಯಕರು ಮಾತುಕತೆ ನಡೆಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸ್ಟಾಲಿನ್, ನಿನ್ನೆ ಡಿಎಂಕೆ ಕೇಂದ್ರ ಕಚೇರಿಯಲ್ಲಿ ರೈತ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ತೆಗೆದುಕೊಂಡ ಮೂರು ನಿರ್ಣಯಗಳನ್ನು ಸಚಿವರಿಗೆ ಹಸ್ತಾಂತರಿಸಿದ್ದೇವೆ. ಕಾವೇರಿ ಜಲ ವಿವಾದ ವಿಚಾರದಲ್ಲಿ ಸರ್ವ ಪಕ್ಷ ಸಭೆ, ವಿಧಾನ ಸಭೆ ವಿಶೇಷ ಅಧಿವೇಶನ ನಡೆಸುವಂತೆ, ತಮಿಳು ನಾಡಿನ ರಾಜಕೀಯ ಪಕ್ಷಗಳ ನಾಯಕರ ನಿಯೋಗ ಮತ್ತು ರೈತ ಪ್ರತಿನಿಧಿಗಳನ್ನು ಪ್ರಧಾನಿಯವರ ಬಳಿಗೆ ಕರೆದೊಯ್ಯುವ ನಿರ್ಣಯ ಕೈಗೊಳ್ಳುವ ಬೇಡಿಕೆಯನ್ನು ಸಚಿವರ ಮುಂದಿಟ್ಟಿದ್ದೇವೆ ಎಂದು ಹೇಳಿದರು.
ತಮ್ಮ ಬೇಡಿಕೆಗಳನ್ನು ಪರಿಗಣಿಸುವುದಾಗಿ ಪನ್ನೀರ್ ಸೆಲ್ವಂ ಹೇಳಿದ್ದಾರೆ ಎಂದು ಸ್ಟಾಲಿನ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.ನಿರ್ಣಯಗಳ ಪ್ರತಿಯೊಂದನ್ನು ಡಿಎಂಕೆ ತಮಿಳು ನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರಾಮ ಮೋಹನ್ ರಾವ್ ಅವರಿಗೆ ಕಳುಹಿಸಿದೆ.