ಮಲಯಾಳಂ ನಟ ಮೋಹನ್ ಲಾಲ್ (ಸಂಗ್ರಹ)
ಕೊಚ್ಚಿ: 2011ರಲ್ಲಿ ತಮ್ಮ ನಿವಾಸದಲ್ಲಿ ಅಕ್ರಮವಾಗಿ ಆನೆಯ ದಂತವನ್ನು ಇಟ್ಟುಕೊಂಡಿದ್ದರು ಎಂಬ ಕಾರಣಕ್ಕೆ ಮಲಯಾಳಂ ಚಲನಚಿತ್ರ ನಟ ಮೋಹನ್ ಲಾಲ್ ವಿರುದ್ಧ ತ್ವರಿತ ಪರಿಶೀಲನೆ ತನಿಖೆ ನಡೆಸುವಂತೆ ಕೇರಳದ ಜಾಗ್ರತ ನ್ಯಾಯಾಲಯ ಆದೇಶಿಸಿದೆ.
ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಚಿವ ಹಾಗೂ ಶಾಸಕ ತಿರುವನಂಚೂರು ರಾಧಾಕೃಷ್ಣನ್ ಹಾಗೂ ಇವರ ಜೊತೆಗೆ ನಟನಿಗೆ ದಂತವನ್ನು ಉಡುಗೆಯಾಗಿ ನೀಡಿದ ಮತ್ತಿಬ್ಬರಾದ ಪಿ.ಎಂ.ಕೃಷ್ಣ ಕುಮಾರ್ ಮತ್ತು ಕೆ.ಜೆ.ಕೃಷ್ಣ ಕುಮಾರ್ ಅವರನ್ನು ಕೂಡ ವಿಚಾರಣೆ ನಡೆಸಲಾಗುತ್ತದೆ.
ಮೋಹನ್ ಲಾಲ್ ಅವರ ಮನೆಯಿಂದ ದಂತವನ್ನು ವಶಪಡಿಸಿಕೊಂಡ ನಂತರ ಕೂಡ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದ ಆರೋಪ ರಾಧಾಕೃಷ್ಣನ್ ಅವರ ಮೇಲಿದೆ.
2011ರಲ್ಲಿ ಆದಾಯ ತೆರಿಗೆ ಇಲಾಖೆಯವರು ಮೋಹನ್ ಲಾಲ್ ಮನೆ ಮೇಲೆ ದಾಳಿ ನಡೆಸಿದಾಗ ದಂತ ಕಂಡುಬಂದಿದೆ. ಆದಾಯ ತೆರಿಗೆ ಇಲಾಖೆ ವಿಷಯವನ್ನು ಕೇರಳ ಅರಣ್ಯ ಇಲಾಖೆಗೆ ತಲುಪಿಸಿತ್ತು. ಆಗ ಅರಣ್ಯ ಇಲಾಖೆ,1972ರ ವನ್ಯಮೃಗ ಸಂರಕ್ಷಣೆ ಕಾಯ್ದೆಯಡಿ ಅಕ್ರಮವಾಗಿ ದಂತ ಇಟ್ಟುಕೊಂಡಿರುವುದಕ್ಕೆ ಕೇಸು ದಾಖಲಿಸಿತ್ತು.
ಆದರೆ ನಟನ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಅದಕ್ಕೆ ನ್ಯಾಯಾಲಯ ರಾಜ್ಯ ಜಾಗ್ರತ ಮತ್ತು ಭ್ರಷ್ಟಾಚಾರ ವಿರೋಧಿ ದಳಕ್ಕೆ ಆದೇಶ ನೀಡಿ ತ್ವರಿತ ವಿಚಾರಣೆ ನಡೆಸುವಂತೆ ಮತ್ತು ಡಿಸೆಂಬರ್ 12ರೊಳಗೆ ವರದಿ ನೀಡುವಂತೆ ಆದೇಶ ನೀಡಿದೆ.
ಈ ಮಧ್ಯೆ ಮೋಹನ್ ಲಾಲ್ ಅವರು ಕೇಂದ್ರ ಅರಣ್ಯ ಸಚಿವಾಲಯಕ್ಕೆ ಪತ್ರ ಬರೆದು ತಮ್ಮ ಮೇಲಿನ ಕೇಸಿನ ವಿಚಾರದಲ್ಲಿ ಕಾನೂನು ವಿನಾಯ್ತಿ ನೀಡುವಂತೆ ಕೋರಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos