ನೌಶೆರಾ: ಪಾಕಿಸ್ತಾನ ಮತ್ತೆ ತನ್ನ ಉದ್ಧತನವನ್ನು ಮುಂದುವರೆಸಿದ್ದು ಜಮ್ಮು ಮತ್ತು ಕಾಶ್ಮೀರದ ನೌಶೆರಾ ಸೆಕ್ಟರ್ ಬಳಿ ಭಾನುವಾರ ಮತ್ತೆ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ತಿಳಿದುಬಂದಿದೆ.
ನಾಗರೀಕ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡಿರುವ ಪಾಕಿಸ್ತಾನ, ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಪಾಕಿಸ್ತಾನದ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ದಾಳಿ ವೇಳೆ ಸಾವು-ನೋವುಗಳು ಸಂಭವಿಸಿರುವ ಕುರಿತಂತೆ ವರದಿಗಳಾಗಿಲ್ಲ.
ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಸೆ.29ರಂದು ಸೀಮಿತ ದಾಳಿ ನಡೆಸಿದ ಬಳಿಕ ಪಾಕಿಸ್ತಾನದ ಉಗ್ರ ಸಂಘಟನೆಗಳು ಪ್ರತೀಕಾರ ತೀರಿಸಿಕೊಳ್ಳಲು ಸತತ ಯತ್ನಗಳನ್ನು ಮಾಡುತ್ತಲೇ ಇದ್ದು, ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿವೆ ಎಂದು ಗುಪ್ತಚರ ಇಲಾಖೆ ಈ ಹಿಂದೆ ಎಚ್ಚರಿಕೆ ನೀಡಿತ್ತು. ಇದರ ನಡುವೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಒಂದಾದ ಮೇಲೆ ಒಂದು ದಾಳಿಯಂತೆ ಅಟ್ಟಹಾಸ ಮೆರೆಯಲು ಆರಂಭಿಸಿದ್ದಾರೆ.