ಕಳೆದ ವರ್ಷ ಯುಮುನಾ ಎಕ್ಸ್ ಪ್ರೆಸ್ ವೇಯಲ್ಲಿ ಮಿರಾಜ್ -2000 ವಿಮಾನ ಭೂ ಸ್ಪರ್ಷ ಮಾಡಿದ್ದ ಸಂದರ್ಭ
ನವದೆಹಲಿ: ಹೆದ್ದಾರಿಗಳನ್ನು ಹಿರಿದುಗೊಳಿಸಿ ರನ್ ವೇ ನಿರ್ಮಿಸಲು ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮುಂದಾಗಿದ್ದು ಈ ನಿಟ್ಟಿನಲ್ಲಿ ರಕ್ಷಣಾ ಇಲಾಖೆಯೊಂದಿಗೆ ಪ್ರಸ್ತಾಪ ಮುಂದಿಟ್ಟಿದೆ. ದೇಶಾದ್ಯಂತ ರನ್ ವೇ ನಿರ್ಮಾಣಕ್ಕೆ 22 ಸ್ಥಳಗಳನ್ನು ಗುರುತಿಸಲಾಗಿದೆ.
ರನ್ ವೇ ಆಗಿ ಹೆದ್ದಾರಿಗಳನ್ನು ಹಿರಿದು ಮಾಡಿ ನಿರ್ಮಿಸುವ ಪ್ರಸ್ತಾವನೆಯಿದೆ ಎಂದು ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ಪ್ರಸ್ತಾವನೆ ಬಗ್ಗೆ ದೃಢಪಡಿಸಲು ರಕ್ಷಣಾ ಸಚಿವಾಲಯದೊಂದಿಗೆ ಸದ್ಯದಲ್ಲಿಯೇ ಸಭೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ಅಧಿಕಾರಿಯೊಬ್ಬರ ಪ್ರಕಾರ, ಎರಡೂ ಸಚಿವಾಲಯದ ಅಧಿಕಾರಿಗಳನ್ನೊಳಗೊಂಡ ಸಮಿತಿ, ದೇಶದಲ್ಲಿನ ಇಂತಹ ಹಿರಿದಾದ ಹೆದ್ದಾರಿಗಳನ್ನು ಗುರುತಿಸಿ ಅವುಗಳನ್ನು ರನ್ ವೇಗಳನ್ನಾಗಿ ಪರಿವರ್ತಿಸುವ ಕುರಿತು ನಿರ್ಧರಿಸಲಾಗುವುದು. ಹೆದ್ದಾರಿಗಳ ಹಿರಿದು, ಉದ್ದ ಮತ್ತು ಅಗಲಗಳ ಸಾಧ್ಯಾಸಾಧ್ಯತೆಗಳನ್ನು ಸಮಿತಿ ಪರಿಶೀಲಿಸಲಿದೆ ಎಂದು ಹೇಳಿದ್ದಾರೆ.
ಕಳೆದ ಆಗಸ್ಟ್ ನಲ್ಲಿ ಇಂತಹ ರನ್ ವೇ ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಬಗ್ಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದರು. ಇಂತಹ ಯೋಜನೆಗಳನ್ನು ಅರುಣಾಚಲ ಪ್ರದೇಶ, ಮೇಘಾಲಯ ಮತ್ತು ಇತರ ಗಡಿ ಜಿಲ್ಲೆಗಳಲ್ಲಿ ನಿರ್ಮಿಸಲಾಗುವುದು. ಕ್ಲಿಷ್ಟಕರವಾದ ಸ್ಥಳಗಳಲ್ಲಿ ಸಂಪರ್ಕವನ್ನು ಸುಗಮಗೊಳಿಸಲು ಸಹಾಯವಾಗುತ್ತದೆ ಎಂದು ಕೂಡ ಹೇಳಿದ್ದರು.
ಸ್ಥಳೀಯ ವಾಯು ಸಂಪರ್ಕವನ್ನು ದೇಶದಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ. ಹೊಸ ನಾಗರಿಕ ವಿಮಾನಯಾನ ಯೋಜನೆ ಪ್ರಕಾರ, ಸ್ಥಳೀಯ ಸಂಪರ್ಕ ಯೋಜನೆಗಳು ಆರಂಭಗೊಂಡರೆ ವಾಯುಯಾನಗಳಿಗೆ ವಿವಿಧ ರಿಯಾಯಿತಿಗಳನ್ನು ಒದಗಿಸಲಾಗುತ್ತದೆ.