ನವದೆಹಲಿ: ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರಿಗೆ ಮಂಗಳವಾರ ಬಿಗ್ ರಿಲೀಫ್ ಸಿಕ್ಕಿದೆ.
ನಕಲಿ ಪದವಿ ಪ್ರಕರಣ ಸಂಬಂಧ ಕೇಂದ್ರ ಸಚಿವೆಗೆ ಸಮನ್ಸ್ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪಟಿಯಾಲ ಹೌಸ್ ಕೋರ್ಟ್ ಇಂದು ವಜಾಗೊಳಿಸಿದೆ.
ಸ್ಮೃತಿ ಇರಾನಿ ಅವರು 2004ರ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ಅವರ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಕೆಲವು ದಾಖಲೆಗಳನ್ನು ಚುನಾವಣಾ ಆಯೋಗದ ಅಧಿಕಾರಿಗಳು ಕೋರ್ಟ್ ಗೆ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಹರ್ವಿಂದರ್ ಸಿಂಗ್ ಅವರು, ಆರೋಪಿಗೆ ನೋಟಿಸ್ ನೀಡಲು ನಿರಾಕರಿಸಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಚುನಾವಣಾ ಆಯೋಗಕ್ಕೆ ತಮ್ಮ ವಿದ್ಯಾಭ್ಯಾಸದ ಕುರಿತಂತೆ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಬರಹಗಾರ ಅಹ್ಮದ್ ಖಾನ್ ಅವರು ದೆಹಲಿ ಮೆಟ್ರೋಪಾಲಿಟನ್ ಕೋರ್ಟ್ ಗೆ ದೂರು ನೀಡಿದ್ದರು.
ವಿವಿಧ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಮೂರು ಅಫಿಡವಿಟ್ ಗಳಲ್ಲಿ ಸ್ಮೃತಿ ಇರಾನಿ ತಮ್ಮ ವಿದ್ಯಾಭ್ಯಾಸದ ಬಗ್ಗೆ ನೀಡಿರುವ ವಿವರ ಬೇರೆ, ಬೇರೆಯಾಗಿದೆ ಎಂದು ಖಾನ್ ದೂರಿನಲ್ಲಿ ತಿಳಿಸಿದ್ದರು.