ದೇಶ

ನಾಪತ್ತೆಯಾಗಿರುವ ಕಡತಗಳ ಉತ್ಖನನಕ್ಕಾಗಿ ಪಿಎಂಒ ನಲ್ಲಿ ಪುರಾತತ್ವ ವಿಭಾಗ: ಪ್ರಧಾನಿ ಮೋದಿ

Srinivas Rao BV

ಹಿಮಾಚಲಪ್ರದೇಶ: ನಾಪತ್ತೆಯಾಗಿರುವ ಸರ್ಕಾರಿ ಕಡತಗಳಿಗಾಗಿ ಪ್ರಧಾನಿ ಕಾರ್ಯಾಲಯ ಪುರಾತತ್ವ ವಿಭಾಗವನ್ನೇ ಪ್ರಾರಂಭಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳ್ದಿದಾರೆ.

ಹಿಮಾಚಲಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗಳ ಕಡತಗಳು ನಾಪತ್ತೆಯಾಗಿರುವುದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಕಾರ್ಯಾಲಯ ಪುರಾತತ್ವ ವಿಭಾಗವನ್ನೇ ಪ್ರಾರಂಭಿಸಬೇಕಾದ ಸ್ಥಿತಿ ಬಂದಿದೆ ಎಂದು ವ್ಯಂಗ್ಯ ಧಾಟಿಯಲ್ಲಿ ಹೇಳಿದ್ದಾರೆ.

ಕಳೆದ 30-40 ವರ್ಷಗಳ ಹಿಂದಿನ ಯೋಜನೆಗಳಿಗೆ ಸಂಬಂಧಿಸಿದ ಎಷ್ಟು ಕಡತಗಳು ನಾಪತ್ತೆಯಾಗಿದೆ ಎಂದರೆ ಅದನ್ನು ಹುಡುಕಲು ಪ್ರಧಾನಿ ಕಾರ್ಯಾಲಯ ಪ್ರತ್ಯೇಕವಾದ ಒಂದು ಪುರಾತತ್ವ ವಿಭಾಗವನ್ನು ಪ್ರಾರಂಭಿಸಬೇಕಿದೆ. ನಾನು ಅಧಿಕಾರ ವಹಿಸಿಕೊಂಡಾಗ ಈ ಬಗ್ಗೆ ನಿಜಕ್ಕೂ ಅಚ್ಚರಿ ಮೂಡಿತ್ತು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಕೆಲವು ದಶಕಗಳ ಹಿಂದೆ ಹಲವು ಯೋಜನೆಗಳನ್ನು ಪ್ರಾರಂಭಿಸಲಾಗಿತ್ತು. ಆದರೆ ಅದಕ್ಕೆ ಶಿಲಾನ್ಯಾಸ ನೆರವೇರಿದ ಬಳಿಕ ಯೋಜನೆಗಳು ಮುಂದುವರೆಯದೆ ಅದಕ್ಕೆ ಸಂಬಂಧಿಸಿದ ಕಡತಗಳೇ ನಾಪತ್ತೆಯಾದವು. ನಂಗಲ್ ಆಣೆಕಟ್ಟು- ತಲ್ವಾರ ರೈಲ್ವೆ ಯೋಜನೆ ಇದಕ್ಕೆ ಉತ್ತಮ ಉದಾಹರಣೆಯಾಗಿದ್ದು 1981 ರಲ್ಲಿ ಪ್ರಾರಂಭವಾದ ಯೋಜನೆ ಇನ್ನೂ ಪೂರ್ಣಗೊಂಡಿಲ್ಲದೆ ನೆನೆಗುದಿಗೆ ಬಿದ್ದಿತ್ತು ಎಂದು ಪ್ರಧಾನಿ ಮಾಹಿತಿ ನೀಡಿದ್ದಾರೆ.    
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 35 ವರ್ಷಗಳ ಹಿಂದಿನ ಯೋಜನೆಗೆ ಮರು ಜೀವ ನೀಡಲಾಗಿದ್ದು 2,100 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಆದರೆ ಇದೆ ಯೋಜನೆ 35 ವರ್ಷಗಳ ಹಿಂದೆಯೇ ಮುಕ್ತಾಯಗೊಳಿಸಿದ್ದರೆ ಕೇವಲ 34 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಳ್ಳುತ್ತಿತ್ತು ಎಂದು ಮೋದಿ ತಿಳಿಸಿದ್ದಾರೆ.

SCROLL FOR NEXT