ನವದೆಹಲಿ: ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು ಜನರ ಮತ ಸೆಳೆಯಲು ಗಡಿ ಭಾಗಗಳಲ್ಲಿ ಹುತಾತ್ಮರಾದ ಸೈನಿಕರ ವಿಷಯವನ್ನು ಎತ್ತಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಎರಡು ದಶಕಗಳ ಹಿಂದಿನ ಹಿಂದುತ್ವ ಕುರಿತು ತೀರ್ಮಾನ ನೀಡುವ ವೇಳೆ ಸುಪ್ರೀಂ ಕೋರ್ಟ್ ಈ ವಿಚಾರವನ್ನು ಕೈಗೆತ್ತಿಕೊಂಡಿದೆ. ಜನರ ಪ್ರಾತಿನಿಧ್ಯ ಕಾಯ್ದೆಯಲ್ಲಿ ರಾಷ್ಟ್ರ ಗುರುತು ಮತ್ತು ರಾಷ್ಟ್ರ ಚಿಹ್ನೆಯ ವ್ಯಾಖ್ಯಾನವನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಟಿ.ಎಸ್. ಠಾಕೂರ್ ಅವರನ್ನೊಳಗೊಂಡ ಏಳು ಮಂದಿ ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ಚುನಾವಣೆಯಲ್ಲಿ ಮತ ಸೆಳೆಯಲು ಹುತಾತ್ಮ ಸೈನಿಕರ ಹೆಸರನ್ನು ಬಳಸಬಾರದು ಎಂದು ಹೇಳಿದೆ.
ರಾಷ್ಟ್ರಧ್ವಜ ಮತ್ತು ರಾಷ್ಟ್ರ ಗೀತೆಯ ಹೆಸರಿನಲ್ಲಿ ಜನರ ಮತ ಸೆಳೆಯಲು ಯತ್ನಿಸಿದರೆ ಮತ್ತು ಗಡಿಯಲ್ಲಿ ಸೈನಿಕರು ಹುತಾತ್ಮರಾಗುತ್ತಿದ್ದಾರೆ ಎಂದು ಹೇಳಿಕೊಂಡು ಪಕ್ಷಗಳು ಪ್ರಚಾರ ಮಾಡಲು ಬಿಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಬೇಕೆಂದರೆ ಭ್ರಷ್ಟಾಚಾರ ಪದ್ಧತಿಗಳನ್ನು ತಡೆಹಿಡಿಯಬೇಕು. ಪ್ರತ್ಯೇಕತಾವಾದಿಗಳಿಗೆ ಹೆಚ್ಚಿನ ಅವಕಾಶ ದೊರಕಿಸಿಕೊಡಬಾರದು ಎಂದು ನ್ಯಾಯಾಲಯ ಹೇಳಿದೆ.