ನವದೆಹಲಿ: ಭಾರತ ಸರ್ಕಾರ ಇಲ್ಲಿನ ಶೈಕ್ಷಣಿಕ ಸಂಸ್ಥೆಗಳನ್ನು ಅಂತಾರಾಷ್ಟ್ರೀಯ ದರ್ಜೆಯ ಶೈಕ್ಷಣಿಕ ಸಂಸ್ಥೆಗಳನ್ನಾಗಿ ರೂಪಿಸಲು ಯತ್ನಿಸುತ್ತಿದೆ. ಆದರೆ ಇದಕ್ಕೆ ಅಣಕವೆಂಬಂತೆ ದೇಶಾದ್ಯಂತ ಇರುವ 20 ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಗಳ ಪೈಕಿ 10 ಐಐಎಂ ಗಳು ನಿರ್ದೇಶಕರೇ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ.
ಮತ್ತೊಂದು ಅಚ್ಚರಿಯ ಸಂಗತಿ ಎಂದರೆ ಐಐಎಂ ಗಳ ನಿರ್ದೇಶಕರ ಹುದ್ದೆಗೆ ನೇಮಕ ಮಾಡಲು ಶೋಧನಾ ಸಮಿತಿ ಹೆಸರುಗಳ ಪಟ್ಟಿಯನ್ನು ನೀಡಿದ್ದರೂ ಸಹ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಕಳೆದ ಆರು ತಿಂಗಳಿನಿಂದ ಹೆಸರನ್ನು ಅಂತಿಮ ಗೊಳಿಸಿಲ್ಲ.
10 ಐಐಎಂ ಗಳ ಪೈಕಿ ರಾಂಚಿ, ರಾಯ್ ಪುರ, ಬೆಂಗಳೂರು, ರೊಹ್ಟಕ್ ಗಳಿಗೆ ಮಾನವ ಸಂಪನ್ಮೂಲ ಇಲಾಖೆ ಸಚಿವರಾಗಿದ್ದ ಸ್ಮೃತಿ ಇರಾನಿ ಹೆಸರುಗಳನ್ನು ಅಂತಿಮಗೊಳಿಸಿದ್ದರು. ಆದರೆ ಕೇಂದ್ರ ಸಚಿವ ಸಂಪುಟ ಪುನಾರಚನೆಯಾದ ಹಿನ್ನೆಲೆಯಲ್ಲಿ ಐಐಎಂ ಗಳಿಗೆ ಇನ್ನೂ ನಿರ್ದೇಶಕರನ್ನು ನೇಮಕ ಮಾಡಲಾಗಿಲ್ಲ ಎಂದು ಹೆಚ್ ಆರ್ ಡಿ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.