ಲಕ್ನೋ: ತಾವು ಹೊಸ ಪಕ್ಷವನ್ನು ಕಟ್ಟುವುದಿಲ್ಲ ಎಂದು ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಯಾದವ್ ಸ್ಪಷ್ಟನೆ ನೀಡಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರೊಂದಿಗೇ ಇರುವುದಾಗಿ ಹೇಳಿರುವ ಅಖಿಲೇಶ್ ಯಾದವ್, ಮುಲಾಯಂ ಸಿಂಗ್ ಯಾದವ್ ಅವರು ಬಯಸಿದರೇ ನಾನು ರಾಜೀನಾಮೆ ನೀಡುತ್ತಿದ್ದೆ. ಹೊಸ ಪಕ್ಷ ಕಟ್ಟುವುದು ವದಂತಿ ಯಾರೂ ಹೊಸ ಪಕ್ಷ ಕಟ್ಟುತ್ತಿಲ್ಲ ಎಂದು ಬೆಂಬಲಿಗರ ಸಭೆಯಲ್ಲಿ ಹೇಳಿದ್ದಾರೆ.
ಪಕ್ಷದ ವರಿಷ್ಠರ ನಡುವೆ ಕೆಲವು ಜನರು ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅಖಿಲೇಶ್ ಯಾದವ್, ಪಕ್ಷದ ವಿರುದ್ಧ ಯಾರೇ ಪಿತೂರಿ ಮಾಡುತ್ತಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಇನ್ನೂ ಪಕ್ಷದೊಳಗಿನ ಆಂತರಿಕ ಕಲಹದ ಬಗ್ಗೆ ಪ್ರತಿಕ್ರಿಯಿಸಿರುವ ಮುಲಾಯಂ ಸಿಂಗ್ ಯಾದವ್, ಪಕ್ಷ ಕಟ್ಟಲು ನಾನು ಜೈಲಿಗೆ ಹೋಗಿದ್ದೇನೆ, ಲಾಟಿ ಏಟು ತಿಂದಿದ್ದೇನೆ, ಈಗ ಕೂಗಾಡುತ್ತಿರುವವರು ಯಾರೂ ಜೈಲಿಗೆ ಹೋಗಿಲ್ಲ, ಲಾಟಿ ಏಟು ತಿಂದಿಲ್ಲ, ಪಕ್ಷವನ್ನು ಹಾಳು ಮಾಡಲು ಯತ್ನಿಸದರೇ ಅಂಥವರನ್ನು ಪಕ್ಷದಿಂದ ಹೊರಗೆ ಹಾಕುತ್ತೇನೆ, ನಾನಿನ್ನೂ ಬಲಹೀನನಾಗಿಲ್ಲ, ಎಂದು ಮುಲಾಯಂ ಸಿಂಗ್ ಯಾದವ್ ಎಚ್ಚರಿಕೆ ನೀಡಿದ್ದಾರೆ. ಸಮಾಜವಾದಿ ಪಶ್ರದಲ್ಲಿ ಸಂಘರ್ಷ ಉಂಟಾಗಿರುವುದು ದುಃಖವಾಗಿದೆ, ನನ್ನ ಕುಟುಂಬದಲ್ಲಿ ಬಿಕ್ಕಟ್ಟು ಮೂಡಿರುವುದು ನೋವುಂಟು ಮಾಡಿದೆ. ಪಕ್ಷಕ್ಕಾಗಿ ಶಿವಪಾಲ್ ಯಾದವ್ ತುಂಬಾ ದುಡಿದಿದ್ದಾರೆ ಎಂದು ಹೇಳುವ ಮೂಲಕ ಮುಲಾಯಂ ತಮ್ಮ ಸಹೋದರನ ಬೆನ್ನಿಗೆ ನಿಂತಿದ್ದಾರೆ.
ಅಖಿಲೇಶ್ ಯಾದವ್, ಮುಲಾಯಂ ಸಿಂಗ್ ಯಾದವ್ ಸಹೋದರ ಸಚಿವ ಶಿವಪಾಲ್ ಯಾದವ್ ಸೇರಿದಂತೆ 4 ಸಚಿವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ್ದರು. ಈ ಬೆಳವಣಿಗೆಗೆ ತಿರುಗೇಟು ನೀಡಿದ್ದ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅಖಿಲೇಶ್ ಯಾದವ್ ಬೆಂಬಲಿಗ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರನ್ನು 6 ವರ್ಷದ ವರೆಗೆ ಪಕ್ಷದಿಂದ ಉಚ್ಚಾಟಿಸಿದ್ದರು.