ದೆಹಲಿ: ಕೆಲಕಾಲ ಆತಂಕ ಸೃಷ್ಟಿ ಮಾಡಿದ್ದ ದೆಹಲಿಯ ಚಾಂದಿನಿ ಚೌಕ್ ಸ್ಫೋಟಕ್ಕೆ ಪಟಾಕಿ ಕಾರಣ ಎಂದು ತಜ್ಞರು ಹೇಳಿದ್ದಾರೆ.
ಇಂದು ಬೆಳಗ್ಗೆ ದೆಹಲಿಯ ಚಾಂದಿನಿಚೌಕ್ ಬಳಿಯ ನಯಾ ಬಜಾರ್ ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಸ್ಫೋಟ ಪಟಾಕಿಯಿಂದ ಸಂಭವಿಸಿದ್ದು ಎಂದು ಹೇಳಲಾಗುತ್ತಿದೆ. ಸ್ಫೋಟ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ತಜ್ಞರ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ. ಆದರೆ ಸ್ಫೋಟಗೊಂಡ ಸ್ಥಳದಲ್ಲಿ ಪಟಾಕಿ ತಯಾರಿಕೆಯಲ್ಲಿ ಬಳಸಲಾಗುವಂತಹ ರಾಸಾಯನಿಕಗಳು ಪತ್ತೆಯಾಗಿವೆ. ಹೀಗಾಗಿ ಇದು ಪಟಾಕಿ ಅವಘಡ ಎಂದು ಹೇಳಲಾಗುತ್ತಿದೆ.
ಇನ್ನು ಸ್ಥಳೀಯರು ತಿಳಿಸಿರುವಂತೆ ಈ ಪ್ರದೇಶದಲ್ಲಿ ಚಿಂದಿ ಆಯುವ ವ್ಯಕ್ತಿ ತನ್ನ ಚೀಲದಲ್ಲಿ ಪಟಾಕಿ ತುಂಬಿಕೊಂಡಿದ್ಜ. ಇದೇ ವೇಳೆ ಆತ ಬೀಡಿ ಸೇದುತ್ತಿದ್ದು, ಬೀಡಿಯ ಕಿಡಿ ಪಟಾಕಿಗೆ ತಗುಲಿ ಸ್ಫೋಟ ಸಂಭವಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ಇದಕ್ಕೆ ಇಂಬು ನೀಡುವಂತೆ ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದು, ಸಿಸಿಟಿವಿಯಲ್ಲಿ ಸ್ಫೋಟದ ದೃಶ್ಯಾವಳಿ ಸೆರೆಯಾಗಿದೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಚಾಂದಿನಿಚೌಕ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.