ನವದೆಹಲಿ: ದೆಹಲಿಯ ಚಾಂದಿನಿಚೌಕ್ ನಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟು ಐದು ಮಂದಿ ಗಾಯಗೊಂಡಿದ್ದಾರೆ.
ಮೂಲಗಳ ಪ್ರಕಾರ ಇಂದು ಬೆಳಗ್ಗೆ 11.30ರ ಸುಮಾರಿನಲ್ಲಿ ಚಾಂದಿನಿಚೌಕ್ ನಯಾಬಜಾರ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಅಂತೆಯೇ ಐದು ಮಂದಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಚಾರ ತಿಳಿಯುತ್ತಿದ್ದಂತೆಯೇ ಉಗ್ರ ನಿಗ್ರಹ ಕಾರ್ಯಪಡೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಬಾಂಬ್ ನಿಷ್ಕ್ರಿಯ ದಳ ಕೂಡ ಆಗಮಿಸಿ ಸ್ಥಳ ಪರಿಶೀಲನೆ ನಡೆಸುತ್ತಿದೆ. ಅಂತೆಯೇ ಸುತ್ತಮತ್ತಲ ಪ್ರದೇಶದಲ್ಲಿ ತೀವ್ರ ಶೋಧ ನಡೆಸಲಾಗುತ್ತಿದ್ದು, ಪ್ರಸ್ತುತ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ವಿಧಿವಿಜ್ಞಾನ ತಂಡ ನುರಿತ ತಜ್ಞರು ಪರಿಶೀಲನೆ ನಡೆಸಿದ್ದಾರೆ.
ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುರಿತು ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ. ಆರಂಭದಲ್ಲಿ ಇದನ್ನು ಸಿಲಿಂಡರ್ ಸ್ಫೋಟ ಎಂದು ಭಾವಿಸಲಾಗುತ್ತಿತ್ತಾದರೂ, ಬಳಿಕ ಉಗ್ರರ ಕೃತ್ಯವಿರಬಹುದು ಎಂದು ಶಂಕಿಸಲಾಗಿತ್ತು. ಇದೀಗ ವಿಧಿವಿಜ್ಞಾನ ತಂಡದ ತಜ್ಞರು ಪರಿಶೀಲನೆ ನಡೆಸುತ್ತಿದ್ದು, ಸ್ಫೋಟ ನಡೆಸಿದ ಸ್ಥಳದಲ್ಲಿ ಪಟಾಕಿಯಲ್ಲಿ ಬಳಸಲಾಗುವಂತಹ ರಾಸಾಯನಿಕಗಳು ಪತ್ತೆಯಾಗಿವೆ.
ಮುಂಜಾಗ್ರತಾ ಕ್ರಮವಾಗಿ ಸ್ಫೋಟ ಸ್ಥಳದಲ್ಲಿ ಪೊಲೀಸರು ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಶೋಧ ನಡೆಸುತ್ತಿದ್ದಾರೆ. ಸ್ಫೋಟ ಸಂಭವಿಸಿರುವ ನಯಾ ಬಜಾರ್ ಮಾರುಕಟ್ಟೆ ಸಗಟ ವ್ಯಾಪರಕ್ಕೆ ಖ್ಯಾತಿ ಪಡೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗಾರರು ಇಲ್ಲಿದ್ದರು ಎಂದು ಹೇಳಲಾಗುತ್ತಿದೆ.