ದೇಶ

ಕಾಶ್ಮೀರದಲ್ಲಿ ಶಾಂತಿ ಕದಡಲು ಪಾಕ್ ನಿಂದ ಆರ್ಥಿಕ ನೆರವು: ನಾಲ್ವರ ಬಂಧನ

Srinivas Rao BV

ಶ್ರೀನಗರ: ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಲು ಪಾಕಿಸ್ತಾನದಿಂದ ಹಣಕಾಸು ನೆರವು ಪಡೆದಿದ್ದ ಇಬ್ಬರು ಉಗ್ರ ಸಂಘಟನೆ ಸದಸ್ಯರು ಸೇರಿದಂತೆ ಒಟ್ಟು 4 ಜನರನ್ನು ಬಂಧಿಸಲಾಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಬಂಧಿಸಲಾಗಿರುವ ನಾಲ್ಕು ಜನರು, ಕಾಶ್ಮೀರದಲ್ಲಿ ಶಾಂತಿಯುತ ವಾತಾವರಣವನ್ನು ಕದಡಲು ಇತ್ತೀಚೆಗಷ್ಟೇ ಪಾಕಿಸ್ತಾನಕ್ಕೆ ತೆರಳಿ ಹಣದ ನೆರವು ಪಡೆದಿದ್ದರು ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆ ಮೂಲಕ ತಿಳಿದುಬಂದಿದೆ.

ಬಾರಾಮುಲ್ಲಾ ಜಿಲ್ಲೆಯ ಮಿರ್ ಸಾಹಿಬ್, ಸೊಪೊರೆಯ ಗೌಹರ್ ಅಹ್ಮದ್ ಭಟ್ ಹಾಗು ಹಿಲಾಲ್ ಅಹ್ಮದ್ ಗೋಜ್ರಿ, ಸಯೀದ್ ಕರೀಂ ಬಂಧಿತರಾಗಿದ್ದು, ಈ ಪೈಕಿ ಹಿಲಾಲ್ ಅಹ್ಮದ್ ಗೋಜೆರಿ ಹಾಗು ಸಯೀದ್ ಕರೀಂ ಪಾಕ್ ಮೂಲದ ಉಗ್ರ ಸಂಘಟನೆ ತೆಹರೀಕ್-ಇ-ಜಿಹಾದ್-ಇ- ಇಸ್ಲಾಮಿ( ಟಿಜೆಐ) ಸದಸ್ಯರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ವೇಳೆ ವಾತಾವರಣವನ್ನು ಮತ್ತಷ್ಟು ಕದಡಲು ಈ ನಾಲ್ವರು ಪಾಕಿಸ್ತಾನದಿಂದ ತಲಾ 50,000 ರೂ ಗಳನ್ನು ಪಡೆದಿರುವುದಾಗಿ ಬಂಧಿಸಲಾಗಿರುವ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಬಂಧನಕ್ಕೊಳಗಾಗಿರುವ ನಾಲ್ವರು ಮತ್ತಿಬ್ಬರ ಹೆಸರನ್ನು ಹೇಳಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT