ಹೈದರಾಬಾದ್: ಭಯೋತ್ಪಾದಕರಿಗೆ ತರಬೇತಿ ನೀಡುತ್ತಿರುವ, ಆರ್ಥಿಕ ನೆರವು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಪಾಕಿಸ್ತಾನ ಆತ್ಮಹತ್ಯಾ ನಡೆಯನ್ನು ಅನುಸರಿಸುತ್ತಿದೆ ಎಂದು ಎಚ್ಚರಿಸಿದ್ದಾರೆ.
ಪಾಕಿಸ್ತಾನ ಕೇವಲ ಭಯೋತ್ಪಾದಕ ಸಂಘಟನೆಗಳನ್ನು ಉತ್ತೇಜಿಸಿ, ಆರ್ಥಿಕ ನೆರವು ನೀಡುವುದಷ್ಟೇ ಅಲ್ಲದೇ, ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖಂಡ ಮಸೂದ್ ಅಜರ್ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖಂಡ ಸಯೀದ್ ಸಲಾಲುದ್ದೀನ್ ಗೆ ರಕ್ಷಣೆ ನೀಡುತ್ತಿದೆ.
ಪಾಕಿಸ್ತಾನ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನೋಂದಿಗೆ ಸಂಪರ್ಕ ಹೊಂದಿದೆ ಎಂದಿರುವ ವೆಂಕಯ್ಯ ನಾಯ್ಡು, ಅ.24 ರಂದು ಕ್ವೆಟ್ಟಾದಲ್ಲಿ ನಡೆದ ಭಯೋತ್ಪಾದಕ ದಾಳಿ ಪಾಕಿಸ್ತಾನದ ತಪ್ಪು ನೀತಿಗಳ ಫಲ. ಭಯೋತ್ಪಾದನೆಯನ್ನು ಬೆಂಬಲಿಸುತ್ತಿದ್ದ ಪಾಕಿಸ್ತಾನ ಈಗ ತನ್ನದೇ ತಪ್ಪುಗಳಿಂದ ಸಮಸ್ಯೆಗೆ ಸಿಲುಕಿಕೊಂಡಿದೆ, ಭಯೋತ್ಪಾದನೆಯನ್ನು ಬೆಂಬಲಿಸುವ ಮೂಲಕ ಆತ್ಮಹತ್ಯಾ ನಡೆಯನ್ನು ಅನುಸರಿಸುತ್ತಿರುವುದನ್ನು ಪಾಕಿಸ್ತಾನ ಅರಿತುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.