ಭೋಪಾಲ್: ಪಾಕಿಸ್ತಾನದ ಪರವಾಗಿ ಕೇಳಿಬಂದಿರುವ ಬೇಹುಗಾರಿಕೆ ಪ್ರಕರಣದಲ್ಲಿ ನನ್ನ ಪಾತ್ರ ಸಾಬೀತಾಗಿದ್ದೇ ಆದರೆ, ಕುಟುಂಬ ಸಮೇತರಾಗಿ ಆತ್ಮಹತ್ಯೆ ಮಾಡುಕೊಳ್ಳುತ್ತೇವೆಂದು ಸಮಾಜವಾದಿ ಪಕ್ಷದ ಸಂಸದ ಮುನ್ನವಾರ್ ಸಲೀಮ್ ಅವರು ಭಾನುವಾರ ಬೆದರಿಕೆ ಹಾಕಿದ್ದಾರೆ.
ರಕ್ಷಣಾ ಇಲಾಖೆಯ ದಾಖಲೆಗಳು ಹಾಗೂ ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲಾಗುತ್ತಿದೆ ಎಂದು ಹೇಳಿ ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ರಾಯಭಾರಿ ಕಚೇರಿಯ ಅಧಿಕಾರಿಗಳನ್ನು ಬಂಧನಕ್ಕೊಳಪಡಿಸಲಾಗಿತ್ತು. ಇದರ ಬೆನ್ನಲ್ಲೇ ಸಮಾಜವಾದಿ ಪಕ್ಷದ ಸಂಸದ ಮುನ್ನವಾರ್ ಸಲೀಮ್ ಅವರ ಆಪ್ತ ಕಾರ್ಯದರ್ಶಿಯಾಗಿ ಫರ್ಹತ್ ಖಾನ್ ಎಂಬುವವರನ್ನು ನಿನ್ನೆ ಪೊಲೀಸರು ಬಂಧಿಸಿದ್ದರು.
ಬೇಹುಗಾರಿಕೆ ಆರೋಪದ ಮೇರೆಗೆ ತಮ್ಮ ಆಪ್ತ ಕಾರ್ಯದರ್ಶಿ ಬಂಧಿಸಿರುವುದರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಲೀಮ್ ಅವರು, ಸಾಕಷ್ಟು ಪರಿಶೀಲನೆಗಳ ನಂತರವೇ ಫರ್ಹತ್ ನನ್ನು ಆಪ್ತ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಫರ್ಹತ್ ನನ್ನು ನೇಮಕ ಮಾಡಿಕೊಳ್ಳುವುದಕ್ಕೂ ಮೊದಲು ಸಂಸತ್ತು ಹಾಗೂ ಸರ್ಕಾರಕ್ಕೆ ಪರಿಶೀಲನೆ ನಡೆಸಲು ದಾಖಲೆಗಳನ್ನು ಕಳುಹಿಸಲಾಗಿತ್ತು. ನನ್ನ ಜೀವನವೊಂದು ತೆರೆದ ಪುಸ್ತಕವಾಗಿದೆ. ಪಾಕಿಸ್ತಾನ ಪರವಾಗಿ ಆತ ಬೇಹುಗಾರಿಕೆ ನಡೆಸುತ್ತಿದ್ದನೆಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ನೇಮಕ ಮಾಡಿಕೊಳ್ಳುವುದಕ್ಕೂ ಮುನ್ನ ಪೊಲೀಸರು ಹಾಗೂ ಸಂಬಂಧ ಪಟ್ಟ ಇಲಾಖೆಗಳು ಪರಿಶೀಲನೆ ನಡೆಸಿ ಆತನ ಬಗ್ಗೆ ಕ್ಲೀನ್ ಚಿಟ್ ನೀಡಿತ್ತು. ಹೀಗಾಗಿಯೇ ಆತನನ್ನು ಆಪ್ತಕಾರ್ಯದರ್ಶಿಯಾಗಿ ನೇಮಕ ಮಾಡಿಕೊಳ್ಳಲಾಗಿತ್ತು.
ಈ ರೀತಿಯ ವ್ಯಕ್ತಿ ನನ್ನ ಜೀವನದಲ್ಲಿ ಬಂದಿರುವುದಕ್ಕೆ ನಿಜಕ್ಕೂ ವಿಷಾದವನ್ನು ವ್ಯಕ್ತಪಡಿಸುತ್ತೇನೆ. ಆಪ್ತ ಕಾರ್ಯದರ್ಶಿ ನಡೆಸಿರುವ ಬೇಹುಗಾರಿಕೆಯಲ್ಲಿ ನನ್ನ ಪಾತ್ರವಿದೆ ಎಂದು ಸಾಬೀತಾಗಿದ್ದೇ ಆದರೆ, ಕುಟುಂಬ ಸಮೇತರಾಗಿ ಆತ್ಮಹತ್ಯೆಗೆ ಶರಣಾಗುತ್ತೇವೆಂದು ತಿಳಿಸಿದ್ದಾರೆ.