ನವದೆಹಲಿ: ಭೋಪಾಲ್ ಕೇಂದ್ರ ಜೈಲಿನಿಂದ ತಪ್ಪಿಸಿಕೊಂಡಿದ್ದ 8 ಸಿಮಿ ಉಗ್ರರನ್ನು ಹತ್ಯೆ ಮಾಡಿರುವುದು ನಕಲಿ ಎನ್'ಕೌಂಟರ್ ಎಂಬಂತಿದ್ದು, ಈ ಬಗ್ಗೆ ಸುಪ್ರೀಂಕೋರ್ಟ್ ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕಿದೆ ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಎನ್ ಕೌಂಟರ್ ನಲ್ಲಿ ಹತ್ಯೆಯಾಗಿರುವ ಉಗ್ರರ ಫೋಟೋಗಳನ್ನು ಟಿವಿಗಳಲ್ಲಿ ನೋಡಿದ್ದೇನೆ. ಆದರೆ, ಎನ್ ಕೌಂಟರ್ ನಡೆದಿರುವ ಬಗ್ಗೆ ಸಾಕಷ್ಟು ಸಂಶಯಗಳು ಹುಟ್ಟುತ್ತಿವೆ. ಏಕಸಮಯದಲ್ಲಿ 8 ಮಂದಿ ಉಗ್ರರನ್ನು ಎನ್ ಕೌಂಟರ್ ಮಾಡಿರುವುದು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ಸೂಕ್ತ ರೀತಿಯ ಕ್ರಮ ಕೈಗೊಂಡು ತನಿಖೆ ನಡೆಸಬೇಕಿದೆ ಎಂದು ಹೇಳಿದ್ದಾರೆ.
ನಿಷೇಧಿತ ಸಿಮಿ ಉಗ್ರ ಸಂಘಟನೆಯ 8 ಉಗ್ರರು ಸೋಮವಾರ ನಸುಕಿನ 2 ರಿಂದ 3 ಗಂಟೆ ವೇಳೆಗೆ ಭದ್ರತಾ ಕಾವಲುಗಾರ ರಮಾಶಂಕರ್ ಯಾದವ್ ಅವರನ್ನು ಹತ್ಯೆ ಮಾಡಿ, ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದರು. ಉಗ್ರರಿಗಾಗಿ ಭೋಪಾಲ್ ಪೊಲೀಸರು ಹಾಗೂ ಯೋಧರು ಜಂಟಿಯಾಗಿ ಕಾರ್ಯಾಚರಣೆಗಿಳಿದಿದ್ದರು. ಇದರಂತೆ 8 ಉಗ್ರರನ್ನು ಎನ್'ಕೌಂಟರ್ ಮೂಲಕ ಹತ್ಯೆ ಮಾಡಿದ್ದರು. ಈ ಎನ್ ಕೌಂಟರ್ ನ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಪ್ರತಿಪಕ್ಷಗಳು ಇದೊಂದು ನಕಲಿ ಎನ್'ಕೌಂಟರ್ ಆಗಿದೆ ಎಂದು ಟೀಕೆಗಳನ್ನು ವ್ಯಕ್ತಪಡಿಸುತ್ತಿವೆ.