ಭೋಪಾಲ್: ಭೋಪಾಲ್ ಕೇಂದ್ರ ಜೈಲಿನಿಂದ ತಪ್ಪಿಸಿಕೊಂಡಿದ್ದ 8 ಮಂದಿ ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾದ ಉಗ್ರರನ್ನು ಹತ್ಯೆ ಮಾಡಿರುವುದನ್ನು ಮಧ್ಯಪ್ರದೇಶ ಪೊಲೀಸರು ಮಂಗಳವಾರ ಸಮರ್ಥಿಸಿಕೊಂಡಿದ್ದಾರೆ.
ಸಿಮಿ ಉಗ್ರರ ಹತ್ಯೆ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಭೋಪಾಲ್ ಇನ್ಸ್'ಪೆಕ್ಟರ್ ಜನರಲ್ ಆಫ್ ಪೊಲೀಸ್ ಯೋಗೇಶ್ ಚೌಧರಿ ಅವರು, ಗಡಿ ದಾಟುತ್ತಿದ್ದ ವೇಳೆ 8 ಸಿಮಿ ಉಗ್ರರನ್ನು ಎನ್ ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ. ಹತ್ಯೆಯಾದ ಉಗ್ರರು ಈ ಹಿಂದೆ ಸಾಕಷ್ಟು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದಕ್ಕೆ ನಮ್ಮ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಹೇಳಿದ್ದಾರೆ.
ಹತ್ಯೆಯಾದ ಸಿಮಿ ಉಗ್ರರು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು. ಅವರನ್ನು ಬಂಧಿಸುವುದು ಕಷ್ಟಕರವಾಗಿತ್ತು. ಹೀಗಾಗಿ ಯಾವುದೇ ದಾರಿ ಇಲ್ಲದೆ ಎನ್ ಕೌಂಟರ್ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿತ್ತು ಎಂದು ತಿಳಿಸಿದ್ದಾರೆ.
ಜೈಲಿನಿಂದ ಉಗ್ರರು ತಪ್ಪಿಸಿಕೊಂಡಿರುವ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಾಚರಣೆ ನಡೆಸಲು ಆರಂಭಿಸಲಾಗಿತ್ತು. 7-8 ಜನರು ಅನುಮಾನಸ್ಪದವಾಗಿ ಓಡಾಡುತ್ತಿರುವುದಾಗಿ ಕೆಲ ಸ್ಥಳೀಯರು ನಮಗೆ ಮಾಹಿತಿ ನೀಡಿದ್ದರು. ಆದರೆ, ಉಗ್ರರನ್ನು ಹುಡುಕುವುದು ಸಾಕಷ್ಟು ಕಷ್ಟವನ್ನು ತಂದೊಡ್ಡಿತ್ತು. ಇದನ್ನು ಸವಾಲಾಗಿ ತೆಗೆದುಕೊಂಡ ನಮ್ಮ ತಂಡ 8 ಮಂದಿ ಉಗ್ರರನ್ನು ಎನ್ ಕೌಂಟರ್ ಮಾಡುವ ಮೂಲಕ ಹತ್ಯೆ ಮಾಡಿದೆ.
ಹತ್ಯೆಯಾದ ಉಗ್ರರು ಜೈಲಿನಲ್ಲಿದ್ದಾಗಲೂ ಸಾಕಷ್ಟು ಅಪರಾಧ ಕೃತ್ಯಗಳನ್ನು ಮಾಡಿದ್ದರು. ಜೈಲಿನಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಯತ್ನಗಳನ್ನು ಮಾಡಿದ್ದರು. 2008 ಮತ್ತು 2011ರಲ್ಲಿ ಕರ್ತವ್ಯನಿರತ ಪೇದೆಗಳನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಎನ್ ಕೌಂಟರ್ ವಿಡಿಯೋ ಕುರಿತಾಗಿ ವ್ಯಕ್ತವಾಗುತ್ತಿರುವ ಟೀಕೆಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ವಿಡಿಯೋದಲ್ಲಿರುವ ಸತ್ಯಾಂಶಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ತನಿಖೆ ವೇಳೆ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವಿಡಿಯೋವನ್ನು ಪರಿಶೀಲನೆ ನಡೆಸಲಾಗುತ್ತದೆ. ಜೈಲಿನಿಂದ ತಪ್ಪಿಸಿಕೊಂಡು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಂಡು ಹೇಗೆ ಹೊರಗೆ ಹೋದರು ಎಂಬೆಲ್ಲಾ ಅಂಶಗಳನ್ನು ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.