ದೇಶ

ಸಾವಿನಂಚಿನಲ್ಲಿದ್ದ ಸೈನಿಕನ ಪ್ರಾಣ ಉಳಿಸಿದ ಧೀರ ಮಹಿಳೆ

Shilpa D

ಶಿಮ್ಲಾ:  ಅಪಾಯದ ಅಂಚಿನಲ್ಲಿದ್ದ ಸೈನಿಕನ ಪ್ರಾಣವನ್ನು ಉಳಿಸಿ ಮಹಿಳೆಯೊಬ್ಬರು ಧೈರ್ಯ ಪ್ರದರ್ಶಿಸಿದ್ದಾರೆ.

ಆಗಸ್ಟ್‌ 20ರಂದು ಅಸ್ಸಾಂ ರೈಫ‌ಲ್‌ ದಳಕ್ಕೆ ಸೇರಿದ ತಂಡವೊಂದು ಜುಟೋಗ್‌ ಕಂಟೋನ್ಮೆಂಟ್‌ ಪ್ರದೇಶದಲ್ಲಿ ತರಬೇತಿಯಲ್ಲಿ ನಿರತವಾಗಿತ್ತು. ಶಿಮ್ಲಾದಿಂದ ಸುಮಾರು 12 ಕಿ.ಮೀ. ದೂರದ ಬನೂಟಿ ಎಂಬ ಪ್ರದೇಶದಲ್ಲಿ ತರಬೇತಿ ನಿರತ ಈ ಸೈನಿಕರ ಗುಂಪು ಸಾಗುತ್ತಿದ್ದಾಗ ಬೀದಿ ನಾಯಿಗಳ ಗುಂಪೊಂದು ಇವರ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದವು.  ನಾಯಿಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ  ಸೈನಿಕ ಮುಕೇಶ್‌ ಕುಮಾರ್‌ ರಸ್ತೆ ಬದಿಯ 50 ಅಡಿ ಆಳದ ಕಂದಕಕ್ಕೆ ಜಾರಿ ಬಿದ್ದರು. ಹಾಗೆ ಬೀಳುವಾಗ ಅವರ ತಲೆ ಬಂಡೆಕಲ್ಲಿಗೆ ಅಪ್ಪಳಿಸಿತು. ಪರಿಣಾಮವಾಗಿ ಮುಕೇಶ್‌ ಪ್ರಜ್ಞಾಹೀನರಾದರು.

ಆಗ ಮುಕೇಶ್ ತಂಡದಲ್ಲಿದ್ದ ಉಳಿದ ಸೈನಿಕರು ಸಹಾಯಕ್ಕಾಗಿ ಅಂಗಲಾಚಿದರು. ಈ ವೇಳೆ 42 ವರ್ಷ ವಯಸ್ಸಿನ ಗೃಹಿಣಿ ವೀಣಾ ಶರ್ಮಾ ಅವರು ಒಡನೆಯೇ ಸ್ಥಳಕ್ಕೆ ಧಾವಿಸಿದರು ಕೂಡಲೇ ಬಾಯಿಂದ ಬಾಯಿಗೆ ಉಸಿರನ್ನು ತುಂಬುವ ಪ್ರಯತ್ನವನ್ನು ತುರ್ತಾಗಿ ನಡೆಸಿದರು. ಪರಿಣಾಮವಾಗಿ ಮುಕೇಶ್‌ ಅವರ ಉಸಿರಾಟ ಕ್ರಿಯೆ ಕ್ರಮೇಣ ಚಾಲನೆಗೊಂಡಿತು.

ಮುಖೇಶ್ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಬೇಕಿತ್ತು. ಆದರೆ ಪ್ರದೇಶದಲ್ಲಿ ಯಾವುದೇ ವಾಹನ ಸಹಾಯವನ್ನು ನಿರೀಕ್ಷಿಸುವ ಆಗಿರಲಿಲ್ಲ. ವೀಣಾ ಅವರ ಮನೆಯಲ್ಲಿ ಕಾರಿತ್ತು. ಆದರೂ ಮುಕೇಶ್‌ ಜೊತೆ ಸೈನಿಕರಲ್ಲಿ ಯಾರೊಬ್ಬರಿಗೂ  ಡ್ರೈವಿಂಗ್‌ ಗೊತ್ತಿರಲಿಲ್ಲ. ಪರಿಣಾಮವಾಗಿ ಆಕೆ 72 ವರ್ಷದ ತನ್ನ ತಂದೆ ರಮೇಶ್‌ ಶರ್ಮಾ ಅವರನ್ನು ಕಾರು ಚಲಾಯಿಸುವಂತೆ ಕೇಳಿಕೊಂಡರು.

ವೃದ್ಧರಾಗಿರುವ ರಮೇಶ್‌ ಶರ್ಮಾ ತೀರ ಅಪರೂಪಕ್ಕೆ  ಡ್ರೈವಿಂಗ್‌ ಮಾಡುತ್ತಿದ್ದರು. ಸಾವಿನಂಚಿನಲ್ಲಿದ್ದ ಸೈನಿಕನ ಜೀವ ಉಳಿಸಲು ಶರ್ಮಾ ಅವರು ತಕ್ಷಣವೇ ತಮ್ಮ ಕಾರನ್ನು ಹೊರತಂದು ಸೈನಿಕ ಮುಕೇಶ್‌ ಅವರನ್ನು ಕಾರಿನಲ್ಲಿ ಜುಟೋಗ್‌ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ದರು.  ನಂತರ ಅಲ್ಲಿಂದ  ಅವರನ್ನು ಶಿಮ್ಲಾದ ಇಂದಿರಾ ಗಾಂಧಿ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಗೆ ಒಯ್ಯಲಾಯಿತು. ಮುಖೇಶ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.  

ಸೈನಿಕನ ಜೀವ ಉಳಿಸಿದ ಗೃಹಿಣಿ ಸುಷ್ಮಾ ಶರ್ಮಾ ಅವರಿಗೆ ಅಸ್ಸಾಂ ರೈಫ‌ಲ್ಸ್‌ ಪಡೆಯವರು ಸ್ಮರಣಿಕೆ  ಹಾಗೂ ಪ್ರಶಂಸಾ ಪತ್ರವನ್ನು ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ.

SCROLL FOR NEXT