ಶ್ರೀನಗರ: ಕಾಶ್ಮೀರಿ ಪ್ರತ್ಯೇಕವಾದಿಗಳೊಂದಿಗೆ ಮಾತುಕತೆ ನಡೆಸಲು ಯತ್ನಿಸಿದ ಐವರು ಪ್ರತಿಪಕ್ಷ ಸಂಸದರನ್ನೊಳಗೊಂಡ ಸರ್ವಪಕ್ಷ ನಿಯೋಗಕ್ಕೆ ತೀವ್ರ ಮುಖಭಂಗವಾಗಿದ್ದು, ಪ್ರತ್ಯೇಕವಾದಿ ನಾಯಕ ಸೈಯದ್ ಅಲಿ ಶಾಹ್ ಗೀಲಾನಿ ಪ್ರತಿಪಕ್ಷ ನಾಯಕರ ಭೇಟಿಗೂ ನಿರಾಕರಿಸಿದ್ದಾರೆ.
ಪ್ರತ್ಯೇಕವಾದಿಗಳು ಸರ್ವಪಕ್ಷ ನಿಯೋಗದೊಂದಿಗೆ ಮಾತುಕತೆ ನಿರಾಕರಿಸಿದ ನಂತರ ನಾಲ್ವರು ಸಂಸದರಾದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ, ಸಿಪಿಐ ನಾಯಕ ಡಿ ರಾಜಾ, ಜೆಡಿಯು ನಾಯಕ ಶರದ್ ಯಾದವ್ ಹಾಗೂ ಆರ್ ಜೆಡಿಯ ಜಯಪ್ರಕಾಶ್ ನಾರಾಯಣ್ ಅವರು ಪ್ರತ್ಯೇಕವಾಗಿ ಗೀಲಾನಿಯನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ತೆರಳಿದ್ದರು. ಆದರೆ ಕಳೆದ 60 ದಿನಗಳಿಂದ ಗೃಹ ಬಂಧನದಲ್ಲಿರುವ ಗಿಲಾನಿ ಪ್ರತಿಪಕ್ಷ ಸಂಸದರನ್ನು ಭೇಟಿ ಮಾಡಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಗೀಲಾನಿ ಅವರ ಮನೆ ಗೇಟ್ ಬಳಿಯೇ ಪ್ರತಿಪಕ್ಷ ಸಂಸದರನ್ನು ತಡೆದು, ಅವರ ವಿರುದ್ಧ ಘೋಷಣೆ ಕೂಗಲಾಯಿತು. ಈ ವೇಳೆ ಕಿಟಕಿಯಿಂದಲೇ ಸಂಸದರನ್ನು ನೋಡಿದ ಗೀಲಾನಿ. ಅವರನ್ನು ಭೇಟಿ ಮಾಡಲು ನಿರಾಕರಿಸಿದರು.
ಈ ವೇಳೆ ಮಾತನಾಡಿದ ಶರದ್ ಯಾದವ್ ಅವರು, ಪ್ರತ್ಯೇಕವಾದಿಗಳು ನಮ್ಮನ್ನು ಭೇಟಿ ಮಾಡಲಿ, ಬಿಡಲಿ. ಆದರೆ ನಾವು ಎಲ್ಲರೊಂದಿಗೂ ಮಾತುಕತೆ ಸಿದ್ಧವಿದ್ದೇವೆ ಎಂಬುದನ್ನು ತೋರಿಸಲು ಯತ್ನಿಸಿದ್ದೇವೆ ಎಂದರು.
ಇದೇ ರೀತಿ ಜೆಕೆಎಲ್ಎಫ್ ಮುಖ್ಯಸ್ಥ ಯಾಸೀನ್ ಮಲಿಕ್, ಹುರಿಯತ್ ಅಧ್ಯಕ್ಷ ಅಬ್ದುಲ್ ಘನಿ ಭಟ್ ಸಹ ಪ್ರತಿಪಕ್ಷ ಸಂಸದರೊಂದನ್ನು ಭೇಟಿ ಮಾಡಲು ನಿರಾಕರಿಸಿದ್ದಾರೆ.