ಗುರುಗ್ರಾಮ: ರೋಡ್ ರೋಮಿಯೋಗಳ ವಿರುದ್ಧ ಆಪರೇಷನ್ ಮತ್ತೆ ಮುಂದುವರೆದಿದ್ದು, ಹರಿಯಾಣದ ಗುರುಗ್ರಾಮದ ಪೊಲೀಸರು ಶನಿವಾರ ಸಂಜೆ ನಡೆಸಿದ ಕಾರ್ಯಾಚರಣೆ ವೇಳೆ 121 ಜನರು ಬಂಧನಕ್ಕೊಳಗಾಗಿದ್ದಾರೆ.
ಇಲ್ಲಿನ ಎಂ.ಜಿ ರಸ್ತೆಯಲ್ಲಿ ರೋಡ್ ರೋಮಿಯೋಗಳ ಹಾವಳಿ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು 'ಆಪರೇಷನ್ ರೋಡ್ ರೋಮಿಯೋ' ಕಾರ್ಯಾಚರಣೆಯನ್ನು ಕಳೆದ ವಾರವಷ್ಟೇ ಆರಂಭಿಸಿದ್ದರು. ಕೇವಲ 2 ಗಂಟೆಗಳಲ್ಲೇ 50ಕ್ಕೂ ಹೆಚ್ಚು ಯುವಕರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದರು.
ಇದರಂತೆ ನಿನ್ನೆ ಕೂಡ 'ಆಪರೇಷನ್ ರೋಮಿಯೋ ರಿಟರ್ನ್ಸ್' ಎಂದು ಕಾರ್ಯಾಚರಣೆಯನ್ನು ಮುಂದುವರೆಸಿ ಕೇವಲ 2 ಗಂಟೆಗಳಲ್ಲೇ 121 ರೋಡ್ ರೋಮಿಯೋಗಳನ್ನು ಬಂಧಿಸಿದ್ದಾರೆ.
ನಗರದಲ್ಲಿ ಯುವತಿಯರನ್ನು ಚುಡಾಯಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಆರಂಭ ಮಾಡಲಾಗಿತ್ತು. ನಿನ್ನೆ ನಡೆಸಿದ ಕಾರ್ಯಾಚರಣೆ ವೇಳೆ 2 ಗಂಟೆಗಳಲ್ಲಿ 121 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಎಪಿಸಿ ಧರ್ಮ ಯಾದವ್ ಅವರು ಹೇಳಿದ್ದಾರೆ.