ಪಾಟ್ನಾ: ಬಿಹಾರ ಪ್ರವಾಹಕ್ಕೆ ಇನ್ನು ಆರು ಜನ ಆಹುತಿಯಾಗಿದ್ದು, ಸಾವಿನ ಸಂಖ್ಯೆ 204 ಕ್ಕೆ ಏರಿದೆ. ಉಕ್ಕಿ ಹರಿಯುತಿದ್ದ ಗಂಗಾ ಕೆಲವು ಭಾಗಗಳಲ್ಲಿ ಮಟ್ಟ ತಗ್ಗಿಸಿದ್ದರು, ಭಗಲಾಪುರ ಜಿಲ್ಲೆಯ ಕಹಲಗಾಂವ್ ನಲ್ಲಿ ಅಪಾಯದ ಮಟ್ಟಕ್ಕಿಂತಲೂ ಎತ್ತರದಲ್ಲಿ ಹರಿಯುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಭಗಲಾಪುರ ಮತ್ತು ಖಗಾರಿಯಾ ಜಿಲ್ಲೆಗಳಲ್ಲಿ ಈಗ ಮತ್ತೆ 6 ಜನ ಪ್ರವಾಹದಿಂದ ಮೃತಪಟ್ಟಿರುವುದು ವರದಿಯಾಗಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
12 ಜಿಲ್ಲೆಗಳ 2189 ಗ್ರಾಮಗಳಲ್ಲಿ 40 ಲಕ್ಷಕ್ಕೂ ಹೆಚ್ಚು ಜನರ ಜೀವನ ಪ್ರವಾಹದಿಂದ ಅಸ್ತವ್ಯಸ್ತಗೊಂಡಿದೆ ಎಂದು ಇಲಾಖೆ ಹೇಳಿದೆ.
ಪ್ರವಾಹಪೀಡಿತ 12 ಜಿಲ್ಲೆಗಳಾದ ಬಕ್ಸರ್, ಭೋಜಪುರ, ಪಾಟ್ನಾ, ವೈಶಾಲಿ, ಸರನ್, ಬೇಗುಸರೈ, ಲಕ್ಷಿಸರೈ, ಖಗಾರಿಯ, ಮುಂಗೇರ್, ಭಗಲಾಪುರ ಮತ್ತು ಕಥಿಯಾರ್ ನಿಂದ ಏಳು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಗಾಂಧಿ ಘಾಟ್ ಮತ್ತು ದಿಘಾ ಘಾಟ್ ಗಳಲ್ಲಿ ಗಂಗಾ ನದಿ ಮಟ್ಟ ಅಪಾಯಕ್ಕಿಂತಲೂ ಕೆಳಗೆ ಇಳಿದಿದೆ ಎಂದು ಇಲಾಖೆ ತಿಳಿಸಿದೆ.
ಜನರ ರಕ್ಷಣೆಗೆ ಸರ್ಕಾರ 2973 ಹಡಗುಗಳನ್ನು ನಿಯೋಜಿಸಿದ್ದು, ಹಾನಿಗೊಂಡಿರುವ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರೆಣೆಗಾಗಿ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ದಳಗಳಿಗೆ ಕರೆ ನೀಡಲಾಗಿದೆ.
ಪ್ರವಾಹಪೀಡಿತ ಪ್ರದೇಶದಲ್ಲಿ 652 ನಿರಾಶ್ರಿತರ ಶಿಬಿರಗಳನ್ನು ನಿರ್ಮಿಸಲಾಗಿದ್ದು, 1.98 ಲಕ್ಷಕ್ಕೂ ಹೆಚ್ಚು ಜನ ಇಲ್ಲಿ ಆಶ್ರಯ ಪಡೆದಿದ್ದಾರೆ. 589 ತಂಡಗಳು ಗಾಯಗೊಂಡವರಿಗೆ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ.
ಹಾಗೆಯೇ ಪ್ರವಾಹದಿಂದ ಹಾನಿಗೊಂಡಿರುವ ಜಾನುವಾರುಗಳ ರಕ್ಷಣೆಗೆ 210 ಶಿಬಿರಗಳನ್ನು ತೆರೆಯಲಾಗಿದೆ. ಇಲ್ಲಿಯವರೆಗೂ 85 ಕ್ಕೂ ಹೆಚ್ಚು ಜಾನುವಾರುಗಳು ಪ್ರವಾಹದಿಂದ ಮೃತಪಟ್ಟಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics