Se* ಗೆ ನಿರಾಕರಿಸಿದ ಮಹಿಳೆಯ ಮತ್ತು ಆಕೆಯ ಮೊಮ್ಮಗನನ್ನೂ ಕೊಂದ 'ಪಾಪಿ' ಅಜೀಂ ಕೊನೆಗೂ ಅಂದರ್!
ನವೆಂಬರ್ 13 ಮತ್ತು 14ರ ಮಧ್ಯರಾತ್ರಿ ಕನ್ಹಾ ನಗ್ಲಾ ಗ್ರಾಮದಲ್ಲಿ ಈ ಜೋಡಿ ಕೊಲೆ ನಡೆದಿತ್ತು. ಅದೇ ಗ್ರಾಮದ ನಿವಾಸಿಯಾಗಿರುವ ಅಜೀಂ ಎಂಬಾತನೇ ಕೊಲೆ ಆರೋಪಿ. ಹಲವು ಪೊಲೀಸ್ ತಂಡಗಳು ನಡೆಸಿದ ತನಿಖೆಯ..

ಲಖನೌ: ತನ್ನ ಲೈಂಗಿಕ ಆಸೆಗೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಲ್ಲದೆ, ಘಟನೆಯನ್ನು ನೋಡಿದ 8 ವರ್ಷದ ಮೊಮ್ಮಗನನ್ನೂ ಕೊಂದ ಆರೋಪದ ಮೇಲೆ ಉತ್ತರ ಪ್ರದೇಶದ ಬದಾಯೂನ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದು 11 ದಿನಗಳ ಬಳಿಕ ಆರೋಪಿ ಅಜೀಂ ಪೊಲೀಸರ ಬಲೆಗೆ ಬಿದ್ದಿದ್ದಾನೆ. 45 ವರ್ಷದ ನಿಯಾಜ್ ಬಾನೊ ಮತ್ತು ಅವರ 8 ವರ್ಷದ ಮೊಮ್ಮಗ ಅಫ್ನಾನ್ ಕೊಲೆಯಾದವರು.
ನವೆಂಬರ್ 13 ಮತ್ತು 14ರ ಮಧ್ಯರಾತ್ರಿ ಕನ್ಹಾ ನಗ್ಲಾ ಗ್ರಾಮದಲ್ಲಿ ಈ ಜೋಡಿ ಕೊಲೆ ನಡೆದಿತ್ತು. ಅದೇ ಗ್ರಾಮದ ನಿವಾಸಿಯಾಗಿರುವ ಅಜೀಂ ಎಂಬಾತನೇ ಕೊಲೆ ಆರೋಪಿ. ಹಲವು ಪೊಲೀಸ್ ತಂಡಗಳು ನಡೆಸಿದ ತನಿಖೆಯ ಬಳಿಕ ಮಂಗಳವಾರ ಆತನನ್ನು ಬಂಧಿಸಲಾಗಿದೆ.
ವಿಚಾರಣೆ ವೇಳೆ ಆರೋಪಿ ಅಜೀಂ, ನಿಯಾಜ್ ಬಾನೊ ಜೊತೆ ದೈಹಿಕ ಸಂಬಂಧ ಹೊಂದಲು ಬಯಸಿದ್ದಾಗಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಇದೇ ಉದ್ದೇಶದಿಂದ ಕೊಲೆಯಾದ ರಾತ್ರಿ ಆಕೆಯ ಮನೆಗೆ ಹೋಗಿದ್ದ. ಆದರೆ, ಆಕೆ ತನ್ನ ಆಸೆಗೆ ಒಪ್ಪದೆ ವಿರೋಧ ವ್ಯಕ್ತಪಡಿಸಿದ್ದರಿಂದ ಕೋಪಗೊಂಡು ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ವೇಳೆ ನಿಯಾಜ್ ಬಾನೊ ಅವರ ಮೊಮ್ಮಗ ಅಫ್ನಾನ್ ಕೋಣೆಯೊಳಗೆ ಬಂದಿದ್ದಾನೆ. ತಾನು ಮಾಡಿದ ಕೃತ್ಯವನ್ನು ಬಾಲಕ ಬೇರೆಯವರಿಗೆ ತಿಳಿಸಬಹುದು ಎಂಬ ಭಯದಿಂದ ಆತನನ್ನೂ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿ ಅದೇ ರಾತ್ರಿ ದೆಹಲಿಗೆ ತೆರಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಮೇಲೆ ಕಣ್ಣಿಟ್ಟಿದ್ದ ಆರೋಪಿ
ನಿಯಾಜ್ ಬಾನೊ ತನ್ನ ಅತ್ತಿಗೆ ಆಗಿದ್ದು, ಆಕೆಯನ್ನು ಪ್ರೀತಿಸುತ್ತಿದ್ದೆ ಎಂದು ಆರೋಪಿ ಪೊಲೀಸರಿಗೆ ಹೇಳಿದ್ದಾನೆ. ಅಲ್ಲದೆ, ಇಬ್ಬರ ನಡುವೆ ದೈಹಿಕ ಸಂಬಂಧವಿತ್ತು ಎಂದೂ ಹೇಳಿಕೊಂಡಿದ್ದಾನೆ. ತನ್ನ ಪತ್ನಿಯೊಂದಿಗೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದವು ಎಂದು ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ನಿಯಾಜ್ ಬಾನೊ ಅವರು ತಮ್ಮ ಪುತ್ರರೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದರು. ಘಟನೆ ನಡೆಯುವುದಕ್ಕೂ ಎರಡು ದಿನಗಳ ಹಿಂದಷ್ಟೇ ಸ್ವಗ್ರಾಮಕ್ಕೆ ಮರಳಿದ್ದರು. ಅವರನ್ನು ಹಿಂಬಾಲಿಸಿಕೊಂಡೇ ಆರೋಪಿ ಗ್ರಾಮಕ್ಕೆ ಬಂದಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪೊಲೀಸರು ಘಟನಾ ಸ್ಥಳದಲ್ಲಿ ಕೊಲೆಯ ದೃಶ್ಯವನ್ನು ಮರುಸೃಷ್ಟಿಸಿ ತನಿಖೆ ನಡೆಸಿದ್ದಾರೆ. ವಿಚಾರಣೆ ವೇಳೆ ಮೃತರ ಕುಟುಂಬದ ಸದಸ್ಯರ ಮುಂದೆಯೂ ಆರೋಪಿಯನ್ನು ಪ್ರಶ್ನಿಸಿದ್ದಾರೆ.
11 ದಿನಗಳ ಬಳಿಕ ಆರೋಪಿ ಬಂಧನ
ಬದಾಯೂನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಕಿತಾ ಶರ್ಮಾ ಅವರು, ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸಿರುವುದನ್ನು ಖಚಿತಪಡಿಸಿದ್ದಾರೆ. ಜೋಡಿ ಕೊಲೆ ಪ್ರಕರಣದ ತನಿಖೆಗಾಗಿ ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು.
ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಕ್ಕೆ 50 ಸಾವಿರ ರೂಪಾಯಿ ಬಹುಮಾನವನ್ನೂ ಘೋಷಿಸಲಾಗಿತ್ತು. ಬಂಧಿತ ಅಜೀಂನನ್ನು ಪೊಲೀಸ್ ಲೈನ್ಸ್‌ಗೆ ಕರೆತಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುಂದೆ ಹಾಜರುಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


