ನವದೆಹಲಿ: ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿಗೆ ಅಗೌರವ ತೋರಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರ, ಭಾರತದಲ್ಲಿರುವ ಪಾಕಿಸ್ತಾನ ಹೈ ಕಮಿಷನರ್ ಗೆ ಸಮನ್ಸ್ ನೀಡಿದೆ.
"ಪಾಕ್ ಹೈಕಮಿಷನರ್ ಅಬ್ದುಲ್ ಬಸಿತ್ ಅವರನ್ನು ವಿದೇಶಾಂಗ ಇಲಾಖೆಗೆ ಬರುವಂತೆ ಸಮನ್ಸ್ ನೀಡಲಾಗಿತ್ತು. ಭಾರತದ ವಿದೇಶಾಂಗ ಇಲಾಖೆಯ ( ಪಶ್ಚಿಮ) ಕಾರ್ಯದರ್ಶಿ ಸುಜಾತಾ ಮೆಹ್ತಾ, ಅಬ್ದುಲ್ ಬಸಿತ್ ಅವರೊಂದಿಗೆ ಪಾಕಿಸ್ತಾನದಲ್ಲಿ ಭಾರತೀಯ ರಾಯಭಾರಿಗೆ ಅಗೌರವ ತೋರಿರುವ ಪ್ರಕರಣವನ್ನು ಚರ್ಚಿಸಿದ್ದು ಘಟನೆ ಬಗ್ಗೆ ಪ್ರತಿಭಟಿಸಿದ್ದಾರೆ" ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿರುವ ಭಾರತದ ಹೈ ಕಮಿಷನರ್ ಗೌತಮ್ ಬಾಂಬಾವಲೆ ಅವರನ್ನು ಕರಾಚಿ ಚೇಂಬರ್ ಆಫ್ ಕಾಮರ್ಸ್ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಿತ್ತು. ಆದರೆ ಪಾಕಿಸ್ತಾನ ಕಾಶ್ಮೀರದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಗೌತಮ್ ಬಾಂಬಾವಲೆ ಹೇಳಿಕೆ ನೀಡಿದ ಬೆನ್ನಲ್ಲೇ ಯಾವುದೇ ಕಾರಣ ನೀಡದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ರದ್ದುಗೊಳಿಸಲಾಗಿದೆ. ಈ ಘಟನೆಯಿಂದ ಭಾರತೀಯ ರಾಯಭಾರಿಗೆ ಅವಮಾನ ಉಂಟಾಗಿದ್ದು, ಭಾರತ ಸರ್ಕಾರ ಪಾಕಿಸ್ತಾನ ಹೈಕಮಿಷನರ್ ಬಳಿ ಈ ಬಗ್ಗೆ ಚರ್ಚೆ ನಡೆಸಿದ್ದು, ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಸೂಕ್ತ ವಾತಾವರಣ ಕಲ್ಪಿಸಬೇಕೆಂದು ವಿದೇಶಾಂಗ ಇಲಾಖೆ ಅಬ್ದುಲ್ ಬಸಿತ್ ಗೆ ಸೂಚಿಸಿದೆ.