ದೇಶ

'ಪಾಕಿಸ್ತಾನ್ ಜಿಂದಾಬಾದ್' ಕೂಗುವ ಪ್ರತ್ಯೇಕತಾವಾದಿಗಳ ಭೇಟಿ ಅಗತ್ಯವಿಲ್ಲ: ಮುಸ್ಲಿಂ ಧಾರ್ಮಿಕ ಮುಖಂಡರು

Manjula VN

ನವದೆಹಲಿ: 'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗುತ್ತಿರುವ ಪ್ರತ್ಯೇಕತಾವಾದಿಗಳನ್ನು ಭೇಟಿಯಾಗುವ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಮುಸ್ಲಿಂ ಧಾರ್ಮಿಕ ಮುಖಂಡರು ಮಂಗಳವಾರ ಹೇಳಿದ್ದಾರೆ.

ಕಾಶ್ಮೀರದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಮುಸ್ಲಿಂ ಧಾರ್ಮಿಕ ಮುಖಂಡರು ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಭೇಟಿ ನಂತರ ಗೃಹ ಸಚಿವರೊಂದಿಗಿನ ಮಾತುಕತೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮುಸ್ಲಿಂ ಮುಖಂಡರು, ಗೃಹ ಸಚಿವರನ್ನು ಇಂದು ಭೇಟಿ ಮಾಡಿ ಮಾತುಕತೆ ನಡೆಸಲಾಯಿತು. ರಾಜನಾಥ ಸಿಂಗ್ ಅವರೊಂದಿಗಿನ ಮಾತುಕತೆ ಉತ್ತಮವಾಗಿತ್ತು. ಕಾಶ್ಮೀರ ಹಿಂಸಾಚಾರ ಕುರಿತಂತೆ ಮಾತುಕತೆ ನಡೆಸಲಾಯಿತು ಎಂದು ಹೇಳಿದ್ದಾರೆ.

ಕಾಶ್ಮೀರ ಸಮಸ್ಯೆಯನ್ನು ನಮ್ಮ ಗೃಹ ಸಚಿವರು ಬಗೆಹರಿಸಲಿದ್ದಾರೆಂಬ ವಿಶ್ವಾಸ ನಮಗಿದೆ. ಕೆಲ ಜನರು ಪ್ರತ್ಯೇಕತಾವಾದಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪ್ರತ್ಯೇಕತಾವಾದಿಗಳನ್ನು ಭೇಟಿ ಮಾಡುವ ಅಗತ್ಯವಿರಲಿಲ್ಲ. ರಾಜನಾಥ ಸಿಂಗ್ ಅವರ ನಿರ್ದೇಶನವನ್ನು ಪಾಲಿಸಬೇಕು ಎಂದು ಮೌಲಾನಾ ಅನ್ಸಾರ್ ರಾಜಾ ಅವರು ಹೇಳಿದ್ದಾರೆ.

ಹುರಿಯತ್ ಜೊತೆಗೆ ಮಾತುಕತೆ ನಡೆಸಲು ನಾಯಕರು ಯತ್ನ ನಡೆಸಿದ್ದಾರೆ. 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗುವಂತಹ ಜನರ ಮಾತುಕತೆ ಏಕೆ ನಡೆಸಬೇಕು. ಮಾತುಕತೆ ಏನಿದ್ದರೂ 'ಹಿಂದೂಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗುವ ಜನರೊಂದಿಗೆ ಮಾಡಬೇಕು. ಕಾಶ್ಮೀರದಲ್ಲಿ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಬೇಕು. ಸಭೆಯಲ್ಲಿ ಎಲ್ಲಾ ದರ್ಗಾಗಳ ಇಮಾಮ್ ಗಳು ಸಭೆಯಲ್ಲಿ ಭಾಗಿಯಾಗಿ ಸೂಫಿ ಮಸೂದೆ ಬಗ್ಗೆ ಮಾತನಾಡಬೇಕು. ನಂತರ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಮುಂದೆ ಕೂಡ ಭಾರತದ ಅವಿಭಾಜ್ಯವಾಗಿಯೇ ಇರುತ್ತದೆ ಎಂದು ಅವರು ಹೇಳಿದ್ದಾರೆ.

SCROLL FOR NEXT