ನವದೆಹಲಿ: ಕಾವೇರಿ ನೀರಿಗಾಗಿ ಪದೇ ಪದೇ ಕರ್ನಾಟಕದೊಂದಿಗೆ ಕದನಕ್ಕಿಳಿಯುತ್ತಿರುವ ತಮಿಳುನಾಡಿಗೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಚಾಟಿ ಬೀಸಿದ್ದು, ಪದೇ ಪದೇ ನೀರಿಗಾಗಿ ಗೋಗರೆಯುವ ಬದಲು ಸಮುದ್ರದ ನೀರನ್ನೇ ಶುದ್ದೀಕರಿಸಿಕೊಂಡು ಬಳಕೆ ಮಾಡುವಂತೆ ಹೇಳಿದ್ದಾರೆ.
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕಳೆದೊಂದು ವಾರದಿಂದ ಉಭಯ ರಾಜ್ಯಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಆಧಾರದ ಮೇಲೆ ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ಕಾವೇರಿ ನದಿ ನೀರಿಗಾಗಿ ತಮಿಳುನಾಡು ಸರ್ಕಾರ ಕರ್ನಾಟಕವನ್ನು ಗೋಗರೆಯುವುದನ್ನು ಬಿಡಬೇಕು. ಬದಲಿಗೆ ಸಮುದ್ರದ ನೀರನ್ನೇ ಶುದ್ದೀಕರಿಸಿಕೊಂಡು ಕುಡಿಯಲು ಹಾಗೂ ನೀರಾವರಿಗೆ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಇನ್ನು ಸುಬ್ರಮಣಿಯನ್ ಸ್ವಾಮಿ ಅವರ ಈ ಟ್ವೀಟ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಸಮುದ್ರದ ನೀರನ್ನು ಬಳಸಿಕೊಳ್ಳುವ ತಂತ್ರಜ್ಞಾನ ಭಾರತದಲ್ಲಿ ಚಾಲ್ತಿಯಲ್ಲಿದ್ದರೂ ಅದರ ಸಮರ್ಪಕ ಬಳಕೆಗೆ ಮಾತ್ರ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟ್ವೀಟಿಗರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.