2013ರಲ್ಲಿ ಬೆಂಗಳೂರಿನ ಯಲಹಂಕದಲ್ಲಿ ನಡೆದ ವೈಮಾನಿಕ ಪ್ರದರ್ಶನದಲ್ಲಿ ಎಂಬ್ರೇಯರ್ ಜೆಟ್ ನ ಹಾರಾಟ
ನವದೆಹಲಿ: ಯುಪಿಎ ಸರ್ಕಾರ ಅವಧಿಯಲ್ಲಿ ನಡೆದ 208 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತದ ಎಂಬ್ರೇಯರ್ ಜೆಟ್ ಒಪ್ಪಂದದಲ್ಲಿ ಗುತ್ತಿಗೆ ಪಡೆಯಲು ಲಂಚ ನೀಡಿದ ಆರೋಪ ಕೇಳಿಬರುತ್ತಿದೆ. ಈ ಕುರಿತು ಅಮೆರಿಕದ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.
ಈ ಒಪ್ಪಂದ ನಡೆದಿದ್ದು 2008ರಲ್ಲಿ. ಬ್ರೆಝಿಲಿಯನ್ ವಿಮಾನ ತಯಾರಿಕಾ ಕಂಪೆನಿ ಎಂಬ್ರೇಯರ್ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ನಡುವೆ ಒಪ್ಪಂದವಾಗಿತ್ತು. ಮೂರು ವಿಮಾನಗಳ ತಯಾರಿಕೆಗೆ ಸ್ವದೇಶಿ ರಾಡಾರ್ ಗಳ(ಎಇಡಬ್ಲ್ಯು ಅಂಡ್ ಸಿ) ಖರೀದಿಗೆ ನಡೆದ ಒಪ್ಪಂದ ಇದಾಗಿತ್ತು.
ಅಮೆರಿಕದ ನ್ಯಾಯಾಂಗ ಇಲಾಖೆ 2010ರಿಂದ ಈ ಕುರಿತು ತನಿಖೆ ನಡೆಸುತ್ತಿದೆ. ಗುತ್ತಿಗೆ ಖರೀದಿ ವೇಳೆ ಲಂಚ ಸ್ವೀಕರಿಸಲಾಗಿದೆ ಎಂಬ ಸಂಶಯ ಅಲ್ಲಿನ ಅಧಿಕಾರಿಗಳಿಗೆ. ಗುತ್ತಿಗೆ ಪಡೆಯಲು ಎಂಬ್ರೇಯರ್ ಜೆಟ್ ಲಂಚ ನೀಡಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಅಮೆರಿಕ ಅಧಿಕಾರಿಗಳು ಎಂದು ಬ್ರೆಝಿಲ್ ನ ಪತ್ರಿಕೆ ಫೊಲ್ಹ ಡಿ ಸಾವೊ ಪೌಲೊ ವರದಿ ಮಾಡಿದೆ.
ಇದರ ಹಿಂದೆ ಇಂಗ್ಲೆಂಡಿನಲ್ಲಿ ನೆಲೆಸಿರುವ ಪ್ರಮುಖ ಭಾರತೀಯನೊಬ್ಬನ ಕೈವಾಡವಿದೆ ಎಂದು ವರದಿಯಲ್ಲಿ ಸಂಶಯ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಆರ್ ಡಿಒ, ಅಮೆರಿಕ ಅಧಿಕಾರಿಗಳು ತನಿಖೆ ನಡೆಸುತ್ತಿರುವ ಬಗ್ಗೆ ನಮಗೆ ಮಾಹಿತಿ ಸಿಗಬೇಕಷ್ಟೆ ಎಂದು ಹೇಳಿದ್ದಾರೆ.