ನವದೆಹಲಿ: ವಿಮಾನಗಳಲ್ಲಿ ಇನ್ನು ಮುಂದೆ ಸ್ಯಾಮ್ ಸಂಗ್ ನೋಟ್ 7 ಮೊಬೈಲ್ ಫೋನ್ ಗಳನ್ನು ಬಳಕೆ ಮಾಡಬಾರದು ಎಂದು ನಾಗರೀಕ ವಿಮಾನಯಾನ ನಿರ್ದೇಶನಾಲಯ ಆದೇಶ ನೀಡಿದೆ.
ಸ್ಯಾಮ್ ಸಂಗ್ ನೋಟ್ 7 ಮೊಬೈಲ್ ಗಳಲ್ಲಿನ ತಾಂತ್ರಿಕ ದೋಷದಿಂದಾಗಿ ಅವುಗಳ ಬ್ಯಾಟರಿ ಸ್ಫೋಟಗೊಂಡ ಕುರಿತು ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿಮಾನಗಳಲ್ಲಿ ಸ್ಯಾಮ್ ಸಂಗ್ ನೋಟ್ 7 ಮೊಬೈಲ್ ಬಳಕೆ ಮೇಲೆ ಶುಕ್ರವಾರ ನಿಷೇಧ ಹೇರಿದೆ. ವಿಮಾನದೊಳಗೆ ಹೋಗುವ ಮುನ್ನ ಮೊಬೈಲ್ ಗಳನ್ನು ಆನ್ ಮಾಡುವುದಾಗಲೀ ಅಥವಾ ವಿಮಾನದಲ್ಲಿ ಮೊಬೈಲ್ ಅನ್ನು ಚಾರ್ಜ್ ಮಾಡುವುದಾಗಲಿ ಮಾಡುವಂತಿಲ್ಲ ಎಂದು ಹೇಳಿರುವ ಡಿಜಿಸಿಎ ಯಾವುದೇ ಕಾರಣಕ್ಕೂ ನೋಟ್ 7 ಮೊಬೈಲ್ ಅನ್ನು ಬಳಕೆ ಮಾಡಬಾರದು ಎಂದು ಹೇಳಿದೆ.
ಸ್ಯಾಮ್ ಸಂಗ್ ನೋಟ್ 7 ಮೊಬೈಲ್ ಗಳಿಗೆ ಈಗಾಗಲೇ ಅಮೆರಿಕ ಹಾಗೂ ಜಪಾನ್ ದೇಶಗಳು ನಿಷೇಧ ಹೇರಿದ್ದು, ಈ ಪಟ್ಟಿಗೆ ಇದೀಗ ಭಾರತ ಕೂಡ ಸೇರಿದೆ. ಚೆಕ್ ಇನ್ ಬ್ಯಾಗ್‌ಗಳಲ್ಲಿ ಗೆಲಾಕ್ಸಿ ನೋಟ್ ಮೊಬೈಲ್‌ಗಳನ್ನು ಒಯ್ಯುವಂತಿಲ್ಲ. ಕೈಚೀಲಗಳಲ್ಲಿ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ತೆಗೆದುಕೊಂಡು ಹೋಗಬಹುದು. ಪ್ರಯಾಣದ ಅವಧಿಯುದ್ದಕ್ಕೂ ಇದನ್ನೂ ಬಳಸುವಂತಿಲ್ಲ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮುಖ್ಯಸ್ಥ ಬಿ.ಎಸ್. ಭುಲ್ಲರ್ ತಿಳಿಸಿದ್ದಾರೆ.
ಇದಕ್ಕೂ ಮೊದಲು ಖಂತಾಸ್, ಜೆಟ್ ಸ್ಟಾರ್, ವರ್ಜಿನ್ ಆಸ್ಟ್ರೇಲಿಯಾ ವಿಮಾನ ಯಾನ ಸಂಸ್ಥೆಗಳು ಮೊಬೈಲ್ ನಿಷೇಧ ಹೇರಿದ್ದವು. ಇದೀಗ ಆ ಪಟ್ಟಿಗೆ ಭಾರತೀಯ ವಿಮಾನಯಾನ ಸಂಸ್ಥೆಗಳು ಸೇರಿವೆ.
ತಕ್ಷಣದಿಂದಲೇ ಈ ಆದೇಶ ಜಾರಿಗೆ ಬಂದಿದ್ದು, ವಿಮಾನ ಪ್ರಯಾಣ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಹಿಂದೆ ತನ್ನ ನೋಟ್ 7 ಮೊಬೈಲ್ ಗಳಲ್ಲಿ ಬ್ಯಾಟರಿಯಲ್ಲಿನ ತಾಂತ್ರಿಕ ದೋಷದಿಂದಾಗಿ ಮೊಬೈಲ್ ಗಳು ಸ್ಫೋಟಗೊಳ್ಳುತ್ತಿವೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಸ್ಯಾಮ್ ಸಂಗ್ ತನ್ನ ನೋಟ್ 7 ಸರಣಿಯ ಸುಮಾರು 2.7 ಮಿಲಿಯನ್ ಮೊಬೈಲ್ ಗಳನ್ನು ಹಿಂದಕ್ಕೆ ಪಡೆದಿತ್ತು. ಈವರೆಗೂ ವಿಶ್ವಾದ್ಯಂತ ಸುಮಾರು 35 ಸ್ಯಾಮ್ ಸಂಗ್ ನೋಟ್ 7 ಮೊಬೈಲ್ ಗಳು ಸ್ಫೋಟಗೊಂಡಿವೆ ಎಂದು ಹೇಳಲಾಗುತ್ತಿದೆ.