ಚೆನ್ನೈ: ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಟ್ಟ ಪರಿಣಾಮ ಅಲ್ಲಿನ ಮೆಟ್ಟೂರು ಜಲಾಶಯದ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಭಾನುವಾರದ ವೇಳೆಗೆ ನೀರಿನ ಪ್ರಮಾಣ 80 ಅಡಿಗೆ ಏರಿಕೆಯಾಗಿದೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕಳೆದ ಹಲವು ದಿನಗಳಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದ್ದು, ಕಾವೇರಿ ನೀರು ತಮಿಳುನಾಡು ಪ್ರವೇಶಿಸುವ ಬಿಳಿಗೊಂಡ್ಲುವಿನಲ್ಲಿ ಶುಕ್ರವಾರ ನೀರಿನ ಹರಿವಿನ ಪ್ರಮಾಣ 9 ಸಾವಿರ ಕ್ಯೂಸೆಕ್ ಇತ್ತು. ಭಾನುವಾರ ಬೆಳಿಗ್ಗೆ ವೇಳೆಗೆ ನೀರಿನ ಹರಿವಿನ ಪ್ರಮಾಣ 16 ಸಾವಿರ ಕ್ಯೂಸೆಕ್‌ಗೆ ಏರಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಮೆಟ್ಟೂರು ಡ್ಯಾಂ ನಲ್ಲಿ ಒಟ್ಟಾರೆ 42.4 ಟಿಎಂಸಿ ನೀರು ಸಂಗ್ರಹವಾಗಿದೆ ಎಂದು ಹೇಳಲಾಗುತ್ತಿದೆ.
ಇದೇ ರೀತಿ ಕರ್ನಾಟಕದಿಂದ ತಮಿಳುನಾಡಿಗೆ ನೀರು ಹರಿಯುತ್ತಿದ್ದರೆ ಕೆಲವೇ ದಿನಗಳಲ್ಲಿ ಮೆಟ್ಟೂರು ಜಲಾಶಯದ ನೀರಿನ ಮಟ್ಟ 90 ಅಡಿಗೆ ಏರಲಿದೆ.
ಇನ್ನು ಅಪಾರ ಪ್ರಮಾಣದಲ್ಲಿ ಮೆಟ್ಟೂರು ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದರಿಂದ ತಮಿಳುನಾಡು ರೈತರು ಖುಷಿಗೊಂಡಿದ್ದು, ಕಳೆದ 2 ದಿನಗಳಿಂದ ನೀರಿಗೆ ಬಾಗಿನ ಸಮರ್ಪಿಸಿ ತಮ್ಮ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.