ನವದೆಹಲಿ: ದೆಹಲಿಯಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳದೇ ಇರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ದೆಹಲಿಯಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ ನಿಯಂತ್ರಿಸುವುದರಲ್ಲಿ ನಿಮ್ಮ ಜವಾಬ್ದಾರಿ ಇಲ್ಲವೆಂದಾದರೆ ರಾಜೀನಾಮೆ ನೀಡಿ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ. ದೆಹಲಿ ಸಿಎಂ ಹಾಗೂ ಅವರ ಸಚಿವರುಗಳು ಕೇವಲ ಕುರುಕಲು ತಿಂಡಿಗಳಿಗಾಗಿ 546 ಕೋಟಿ ರೂ ಖರ್ಚು ಮಾಡುತ್ತಾರೆ. ಆದರೆ ಪೆನ್ ಖರೀದಿ ಮಾಡುವುದಕ್ಕೂ ತಮಗೆ ಅಧಿಕಾರ ಇಲ್ಲ ಎಂದು ಹೇಳುತ್ತಾರೆ. ಪೆನ್ ಖರೀದಿ ಮಾಡುವುದಕ್ಕೂ ಅಧಿಕಾರ ಇಲ್ಲದವರು ಮುಖ್ಯಮಂತ್ರಿ ಪದವಿಯಲ್ಲೇಕೆ ಇರಬೇಕು ಎಂದು ಸಂಬಿತ್ ಪಾತ್ರ ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ಡೆಂಗ್ಯೂ, ಚಿಕನ್ ಗುನ್ಯ ನಿಯಂತ್ರಿಸಬೇಕಿರುವ ದೆಹಲಿ ಆರೋಗ್ಯ ಸಚಿವರು ಹಾಗೂ ಸಿಎಂ ಕೇಜ್ರಿವಾಲ್ ದೆಹಲಿಯಿಂದ ಹೊರಗಿದ್ದಾರೆ. ಅಷ್ಟೇ ಅಲ್ಲದೇ "ನನಗೆ ಪೆನ್ ಖರೀದಿಸುವುದಕ್ಕೂ ಅಧಿಕಾವಿಲ್ಲ, ಜನರು ಏನೇ ಕೇಳುವುದಿದ್ದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಲೆಫ್ಟಿನೆಂಟ್ ಗೌರ್ನರ್ ನ್ನು ಪ್ರಶ್ನಿಸಲಿ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಕೇಜ್ರಿವಾಲ್ ರಾಜೀನಾಮೆಗೆ ಆಗ್ರಹಿಸಿದೆ.